

ಮಡಿಕೇರಿ: ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನಃ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಗ ದರ್ಶನ ಶ್ರದ್ಧಾಭಕ್ತಿಯಿಂದ ಭಾನುವಾರ ನಡೆಯಿತು.
ಕ್ಷೇತ್ರ ತಂತ್ರಿಗಳಾದ ಕೆ.ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಫೆ.೨೨ ರಂದು ಸಂಜೆ ೬ ಗಂಟೆಯಿಂದ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾ ಸಂಕಲ್ಪ, ಮಾತೃಕಾ ಪೂಜೆ, ಋತ್ವಿಗ್ವರಣೆ, ಪ್ರಸಾದ ಪ್ರತಿಗ್ರಹ, ಸ್ಥಾನ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೆಘ್ನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ಆಶ್ಲೇಷ ಬಲಿ, ಮಹಾಮಂಗಳಾರತಿ ಜರುಗಿತು.
ಭಾನುವಾರ ಬೆಳಿಗ್ಗೆ ೭.೩೦ ರಿಂದ ಗುರುಗಣಪತಿ ಪೂಜೆ, ಗಣಪತಿ ಹೋಮ, ೮.೩೬ಕ್ಕೆ ನಾಗದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಶಾಂತಿಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ೧೧.೩೦ಕ್ಕೆ ಉಡುಪಿಯ ವೇ.ಬ್ರ.ಶ್ರೀ ಎ.ಸುಬ್ರಮಣ್ಯ ಮಧ್ಯಸ್ಥ ನಾಗಪಾತ್ರಿ ನಾಗದರ್ಶನ ಸೇವೆ ನಡೆಸಿಕೊಟ್ಟರು. ನಂತರ ಆಶೀರ್ವಾದ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.