

ವಿಜಯಪುರ: ಕುರಿ ಕಾಯುವ ಮಹಿಳೆಯನ್ನು ಬಲಾತ್ಕಾರಿ ಮಾಡಿದ ಅಪರಾಧಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಹಾವಿನಾಳ ಗ್ರಾಮದ ಅಶೋಕ ಚನ್ನಪ್ಪ ಐಹೊಳ್ಳಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2017ನ. 26 ರಂದು ಮಧ್ಯಾಹ್ನ 2.30ರ ಸುಮಾರಿಗೆ ಹಾವಿನಾಳ ಗ್ರಾಮದ ರಮೇಶ ಮಲ್ಲಪ್ಪ ಹಾವಿನಾಳ ಊರ್ಫ್ ಐಹೊಳ್ಳಿ ಇವರ ಹೊಲದಲ್ಲಿ ಕುರಿಕಾಯ್ದುಕೊಂಡು ಬಂದ ಮಹಿಳೆ ತನ್ನ ಪತ್ರಾಸ್ ಶೆಡ್‌ನಲ್ಲಿ ಕುರಿ ಕಟ್ಟುವಾಗ ಹಿಂದಿನಿಂದ ಬಂದು ಹಿಡಿದುಕೊಂಡು ಬಲವಂತವಾಗಿ ತೊಗರಿ ಹೊಲದಲ್ಲಿ ಕರೆದೊಯ್ದು ಬಾಯಿಗೆ ಬಟ್ಟೆಕಟ್ಟಿ ಬಲಾತ್ಕಾರ ಎಸಗಿದ್ದನು.
ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮದ್ವೇಶ ದಬೇರ್ ಇವರು ಅಪರಾಧಿ ಅಶೋಕ ಐಹೊಳ್ಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಿಪಿಐ ಎಂ.ಬಿ. ಅಸೋದೆ ಪ್ರಕರಣದ ತನಿಖೆ ನಡೆಸಿದ್ದರು. ಸರ್ಕಾರಿ ಅಭಿಯೋಜಕ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.