

ರಾಮನಗರ: ನಗರದ ಹೃದಯ ಭಾಗದಲ್ಲಿರುವ ನಗರಸಭೆಯ ಡಾ.ರಾಜ್ ಕುಮಾರ್ ಕಾಂಪ್ಲೆಕ್ಸ್ ಒಂದು ವಾರದಿಂದ ಕತ್ತಲೆ ಕೂಪಕ್ಕೆ ದೂಡಲ್ಪಟ್ಟಿದೆ.
ಹೌದು, 3.25 ಲಕ್ಷ ರೂ. ಬಿಲ್ ಪಾವತಿ ಮಾಡದೆ ನಗರಸಭೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ವಿದ್ಯುತ್ ಸರಬರಾಜನ್ನು ಬೆಸ್ಕಾಂ ಕಡಿತಗೊಳಿಸಿದ್ದು, ಇದರಿಂದ ಅಂಗಡಿ ಮುಂಗಟ್ಟುಗಳು ಕತ್ತಲೆಯಲ್ಲೇ ವ್ಯಾಪಾರ ಸಡೆಸಬೇಕಾದ ಅನಿವಾರ್ಯತೆ ನಿರ್ವಣವಾಗಿದೆ. ಬೆಸ್ಕಾಂ ಮನವಿಯ ಹೊರತಾಗಿಯೂ ನಗರಸಭೆ ಅಧಿಕಾರಿಗಳು ವಿದ್ಯುತ್ ಬಿಲ್ ಪಾವತಿಸಲು ಮುಂದಾಗದ ಕಾರಣ 5 ದಿನಗಳ ಹಿಂದೆ ಬೆಸ್ಕಾಂ ಸಂಪರ್ಕ ಕಡಿತಗೊಳಿಸಿದೆ.
ಆಕ್ರೋಶ: ವಿದ್ಯುತ್ ಇದ್ದಾಗಲೇ ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ. ಈಗ ಸಂಪರ್ಕ ಕಡಿತಗೊಂಡಿರುವುದರಿಂದ ವ್ಯಾಪಾರ ನಷ್ಟವಾಗುವ ಜತೆಗೆ, ಕಟ್ಟಡ ಪುಂಡಪೋಕರಿಗಳಿಗೆ ಸ್ವರ್ಗದಂತಾಗಿದೆ. ಕೂಡಲೇ ಬಾಕಿ ಪಾವತಿಸಿ ಎಂದು ಮಳಿಗೆಗಳ ಮಾಲೀಕರು ನಗರಸಭೆಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಬೆಸ್ಕಾಂ ಕಚೇರಿಗೆ ತೆರಳಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದ್ದರಾದರೂ ಪ್ರಯೋಜನವಾಗಿಲ್ಲ.
ಅಂಗಡಿಗಳಿಂದಲೂ ಸಂಗ್ರಹವಿಲ್ಲ: ಲಭ್ಯ ಮಾಹಿತಿ ಪ್ರಕಾರ ನಗರಸಭೆ ಅಂಗಡಿ ಮಾಲೀಕರಿಂದಲೂ ವಿದ್ಯುತ್ ಬಿಲ್ ಸಂಗ್ರಹಕ್ಕೆ ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಅಂಗಡಿ ಮಾಲೀಕರು ಪ್ರತಿ ಅಂಗಡಿಗೆ ಪ್ರತ್ಯೇಕ ಬಿಲ್ ಕೊಡಿ ಎಂದು ಹೇಳಿದರೂ ನಗರಸಭೆ ಸ್ಪಂದಿಸುತ್ತಿಲ್ಲ ಎನ್ನುವುದು ಅಂಗಡಿ ಮಾಲೀಕರ ದೂರಾಗಿದೆ.
ಅನೈತಿಕ ಚಟುವಟಿಕೆ ತಾಣ
ಡಾ. ರಾಜ್ಕುಮಾರ್ ಕಾಂಪ್ಲೆಕ್ಸ್ನಲ್ಲಿ ಹಲವಾರು ಅಂಗಡಿಗಳಿದ್ದು, ಬಹುತೇಕ ಮಳಿಗೆಗಳು ಬಾಗಿಲು ತೆರೆದಿಲ್ಲ. ಇದರ ಲಾಭ ಪಡೆದುಕೊಳ್ಳುವ ಕಿಡಿಗೇಡಿಗಳು ಮತ್ತು ದಾರಿಹೋಕರು ರಾತ್ರಿ ಹೊತ್ತಿನಲ್ಲಿ ಈ ಕಟ್ಟಡವನ್ನು ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಕುಡಿತ, ಜೂಜು ಅಡ್ಡೆಯಾಗಿ ಇರುವ ಈ ಕಾಂಪ್ಲೆಕ್ಸ್ ಕೆಲವರಿಗೆ ಸಾರ್ವಜನಿಕ ಶೌಚಗೃಹವಾಗಿದೆ. ಈ ಬಗ್ಗೆ ಕಾಂಪ್ಲೆಕ್ಸ್ನ ಅಂಗಡಿಗಳ ಮಾಲೀಕರು ನಗರಸಭೆ ಗಮನಕ್ಕೆ ತಂದರೂ ಕೆಲದಿನಗಳ ಮಟ್ಟಿಗೆ ಸುಧಾರಿಸುವ ಪರಿಸ್ಥಿತಿ ಮತ್ತೆ ಹದಗೆಡುತ್ತಿದೆ.
ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ವಿಚಾರ ಗಮನಕ್ಕೆ ಬಂದಿದೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಪರಿಹರಿಸಲಾಗುವುದು. | ಶಿವಪ್ಪ ಆಯುಕ್ತರು (ಪ್ರಭಾರ), ನಗರಸಭೆ, ರಾಮನಗರ ನಮಗೂ ಬಿಲ್ ಕೊಡುವುದಿಲ್ಲ, ಅವರೂ ಕಟ್ಟುವುದಿಲ್ಲ. ಇದರಿಂದ ಸಂಜೆ ವೇಳೆಯಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ನಗರಸಭೆ ಇದನ್ನು ಸರಿಪಡಿಸಬೇಕು ಮತ್ತು ಆಯಾ ಅಂಗಡಿಗಳ ಬಿಲ್ಗಳನ್ನು ಕಟ್ಟಲು ಅಂಗಡಿ ಮಾಲೀಕರಿಗೆ ಅವಕಾಶ ಮಾಡಿಕೊಡಬೇಕು. | ಹೆಸರು ಹೇಳಲಿಚ್ಚಿಸದ ಅಂಗಡಿ ಮಾಲೀಕ, ಡಾ.ರಾಜ್ಕುಮಾರ್ ಕಾಂಪ್ಲೆಕ್ಸ್