ಕೊಡಗಿನಲ್ಲಿ ಮಳೆ ಸ್ವಲ್ಪ ಇಳಿಮುಖ

The rains in Kodagu have decreased a little
Published on

ಮಡಿಕೇರಿ:

ಜಿಲ್ಲೆಯ ಕೆಲವು ಕಡೆ ಶನಿವಾರವೂ ಮಳೆಯ ವಾತಾವರಣ ಕಂಡು ಬಂತು. ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರ ಇಳಿಮುಖ ಆಗಿತ್ತು. ಸೋಮವಾರಪೇಟೆ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಮಳೆ ಜೋರಾಗಿತ್ತು. ಮಧ್ಯಾಹ್ನ ನಂತರ ಹಾರಂಗಿ ಜಲಾಶಯಕ್ಕೆ ಒಳಹರಿವು ಸ್ವಲ್ಪ ಕಡಿಮೆ ಆಯಿತು. ಜಿಲ್ಲೆಯಾದ್ಯಂತ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿಧಾನಕ್ಕೆ ತಿಳಿ ಆಗುತ್ತಿರುವಂತೆ ಕಂಡುಬAತು.

ಈ ಮಧ್ಯೆ ಅಲ್ಲಲ್ಲಿ ಮನೆಗಳಿಗೆ ಹಾನಿ, ಬರೆ ಕುಸಿತ, ಮರ ಬೀಳುವ ಪ್ರಕರಣಗಳು ವರದಿಯಾಗಿದೆ. ಕರ್ಣಂಗೇರಿ ಗ್ರಾಮದ ಮೊನಕಾಮ್ಮರಿ ಶಾಲೆಯ ಹಿಂಭಾಗದ ಹೇಮಾವತಿ ಎಂಬವರ ಮನೆ ಮೇಲೆ ಮರ ಬಿದ್ದು ಪೂರ್ಣ ಹಾನಿಯಾಗಿದೆ. ಬಿಳುಗುಂದ ಗ್ರಾಮ ನಿವಾಸಿ ಕೆ.ಎಂ. ಕುಶಾಲಪ್ಪ ಎಂಬವರ ವಾಸದ ಮನೆಗೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾಗಿದೆ.
ಸೋಮವಾರಪೇಟೆ ತಾಲೂಕು ಐಗೂರು - ಹೊಸತೋಟದ ನಡುವೆ ಮರ ಬಿದ್ದು ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ನಂತರ ಮರ ತೆರವು ಮಾಡಲಾಯಿತು. ಪೊನ್ನಂಪೇಟೆ ತಾಲೂಕು ಪೂಕಳ-ಬಿರುನಾಣಿ ಮಧ್ಯೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿತ್ತು. ನಂತರ ಇದನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ವಿರಾಜಪೇಟೆ-ಬೈಂದೂರು ರಸ್ತೆಯ ಮಕ್ಕಂದೂರು ಬಳಿ ರಸ್ತೆಗೆ ಬರೆ ಜರಿದಿದ್ದರಿಂದ ಸೋಮವಾರಪೇಟೆ-ಮಡಿಕೇರಿ ಮಧ್ಯೆ ವಾಹನ ಸಂಚಾರಕ್ಕೆ ವ್ಯತ್ಯಯ ಆಗಿತ್ತು. ಜೋಡುಪಾಲದ ಹತ್ತಿರ ಮುಖ್ಯ ರಸ್ತೆಯಿಂದ 100 ಮೀಟರ್ ಅಂತರದಲ್ಲಿ ಉದ್ದಮ ಮೊಟ್ಟೆಗೆ ಹೋಗುವ ಸೇತುವೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದ್ದು ಈ ಭಾಗದಲ್ಲಿ ಜನರ ಓಡಾಟಕ್ಕೆ ಸಮಸ್ಯೆ ಆಗಿತ್ತು.

ಕಾವೇರಿ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಭಾಗಮಂಡಲ ಹೋಬಳಿಯ ದೋಣಿಕಾಡು ಎಂಬಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಇಲ್ಲಿ ಎರಡೂ ಭಾಗದ ಜನವಸತಿ ಪ್ರದೇಶಗಳಿಗೆ ದೋಣಿಯೇ ಸಂಪರ್ಕ ಮಾರ್ಗವಾಗಿದ್ದು, ದೋಣಿ ಮೂಲಕ ದಾಟುವ ಜನರಿಗೆ ಸುರಕ್ಷತೆಗಾಗಿ ಜಿಲ್ಲಾಡಳಿತದಿಂದ ಜೀವ ರಕ್ಷಕ ಜಾಕೆಟ್‌ಗಳನ್ನು ನೀಡಲಾಯಿತು.

ಶನಿವಾರ ಬೆಳಗ್ಗೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಸರಾಸರಿ 84.95 ಮಿಮೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 99.92 ಮಿಮೀ, ವಿರಾಜಪೇಟೆ ತಾಲೂಕಿನಲ್ಲಿ 45.9 ಮಿಮೀ, ಸೋಮವಾರಪೇಟೆ ತಾಲೂಕಿನಲ್ಲಿ 131.4 ಮಿಮೀ, ಪೊನ್ನಂಪೇಟೆ ತಾಲೂಕಿನಲ್ಲಿ 79.46 ಮಿಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 68.1 ಮಿಮೀ ಸರಾಸರಿ ಮಳೆಯಾಗಿದೆ. ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು (188 ಮಿಮೀ) ಮಳೆ ದಾಖಲಾಗಿದೆ.
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಜಲಾವೃತವಾಗಿತ್ತು. ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ಸುಮಾರು ಅರ್ಧ ಅಡಿಗಳಷ್ಟು ಪ್ರವಾಹದ ನೀರು ಹರಿಯುತ್ತಿತ್ತು.

ಹಾರಂಗಿ ಜಲಾಶಯಕ್ಕೆ 12,800 ಕ್ಯೂಸೆಕ್ ಒಳಹರಿವು ಇದ್ದು, ಇಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2854.95 ಅಡಿಗಳಷ್ಟು ನೀರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net