ಕಣ್ಣೀರು ತರಿಸಿದೆ ಕಣ್ಮರೆಯಾದ ಮಳೆ

Published on

ಅಬ್ಬರಿಸಿ ಮಾಯವಾದ ವರುಣರಾಯ | ಆಕಾಶ ನೋಡುತ್ತಿರುವ ರೈತ | ತೇವಾಂಶ ಕೊರತೆ

ಕಿರಣ್​ ಕುಮಾರ್​, ಹುಳಿಯಾರು
ಆಗಸ್ಟ್​ ಮಾಹೆಯಲ್ಲಿ ಅಬ್ಬರಿಸಿ ರೈತನ ಸಂಭ್ರಮಕ್ಕೆ ಕಾರಣವಾಗಿದ್ದ ಮಳೆರಾಯ ಸೆಪ್ಟೆಂಬರ್​ನಲ್ಲಿ
ಕಾಣದಂತೆ ಮಾಯವಾಗಿ ರೈತರ ಕಣ್ಣೀರಿಗೆ ಕಾರಣನಾಗಿದ್ದಾನೆ.
ಉತ್ಸಾಹದಿಂದ ಬಿತ್ತಿದ್ದ ರಾಗಿ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಕಳೆದ ವರ್ಷ ತಾಲೂಕಿನಲ್ಲಿ ಮಳೆಯ ಕೊರತೆಯಾಗಿ ಬರಗಾಲ ಆವರಿಸಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ ವಾಡಿಕೆಗಿಂತ 3.3 ಮಿಮೀ ಹೆಚ್ಚು ಮಳೆ ಬಿದ್ದು, ರೈತರಲ್ಲಿ ಭರವಸೆ ಮೂಡಿಸಿತ್ತು. ಮೇ ತಿಂಗಳಿಂದಲೂ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಆಗಸ್ಟ್​ ನಲ್ಲಂತೂ ದಾಖಲೆಯ 307.2 ಮಿಮೀ ಹೆಚ್ಚು ಮಳೆಯಾಗಿತ್ತು. ಪರಿಣಾಮ ಬರೋಬ್ಬರಿ ದಾಖಲೆಯ 31,500 ಹೇಕ್ಟರ್​ ರಾಗಿ ಬಿತ್ತನೆ ಮಾಡಿದ್ದ ರೈತರು, ಉತ್ತಮ
ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ತಿಂಗಳಿಂದ ಒಂದೇ ಒಂದು ಹನಿ ಮಳೆಯಾಗದ ಕಾರಣ
ರೈತನಿಗೆ ಆಘಾತ ನೀಡಿದೆ. ಬಾಣಲಿಯಿಂದ ಬೆಂಕಿಗೆ ಬಿದ್ದಂಗೆ ಎನ್ನುವಂತೆ ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಭೂಮಿಯ ಉಷ್ಣಾಂಶ ಸಹ ಏರಿದೆ.
ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲಾರಂಭಿಸಿದ್ದು, ತೇವಾಂಶದ ಕೊರತೆಯುಂಟಾಗಿ ಬೆಳೆ ಹಾನಿಯ
ಭೀತಿ ಎದುರಾಗಿದೆ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲ ಮಾಡಿ ಹೊಲಗಳಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಆಗ ಸ್ವಲ್ಪ ಮಳೆಯಾಗಿದ್ದರಿಂದಾಗಿ ಉತ್ತಮ ಫಸಲು ಬರಲಿ ಎಂಬ ಕಾರಣಕ್ಕಾಗಿ ಕಳೆ ಕಿತ್ತು ಗೊಬ್ಬರ ಹಾಕಿದ್ದರು. ಆ ಬಳಿಕ ಮಳೆಯೇ ಬಾರದ ಕಾರಣ ರೈತರಿಗೆ ತೊಂದರೆಯಾಗಿದೆ.

ದೇವರ ಮೇಲೆ ಭಾರ
ತೇವಾಂಶ ಕೊರತೆಯ ಕಾರಣದಿಂದಾಗಿ ಈ ಎಲ್ಲ ಬೆಳೆಗಳು ಒಣಗುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಬಾಡುವಂತೆ ಗೋಚರಿಸುತ್ತಿವೆ. ವಾರದಲ್ಲಿ ಮಳೆ ಬಾರದೆ ಇದ್ದರೆ ಬೆಳೆ ನೆಲಕಚ್ಚಲಿದೆ. ಹಾಗಾಗಿ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು, ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ, ರಾಗಿ ಪೈರು ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲವರು ಅಕ್ಕಪಕ್ಕದ ತೋಟದವರಿಂದ ಇಂತಿಷ್ಟು ರಾಗಿ ಕೊಡುವ ಒಪ್ಪಂದ ಮಾಡಿಕೊಂಡು ನೀರು ಪಡೆದು ರಾಗಿ ಉಳಿಸಿಕೊಳ್ಳುತ್ತಿದ್ದಾರೆ. ಯಾವುದೇ ನೀರಿನ ವ್ಯವಸ್ಥೆ ಇಲ್ಲದ ರೈತರು ದೇವರ ಮೇಲೆ ಭಾರ ಹಾಕಿ ಕೃಪೆ ತೋರು ವರುಣ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದಾರೆ.

ರೈತರು ಉತ್ಸುಕತೆಯಿಂದ ರಾಗಿ ಬಿತ್ತನೆ ಮಾಡಿದ್ದು, 15 ದಿನಗಳಿಂದ ಮಳೆ ಇಲ್ಲದೆ ಬೆಳೆ ಕಳೆಗುಂದಿದೆ. ಹೆಚ್ಚು ಯೂರಿಯ ಹಾಕಬೇಡಿ ಎಂದರೂ ಕೇಳದೆ ಹಾಕಿದ್ದ ರೈತರ ಬೆಳೆ ಸುಟ್ಟು ಹೋಗುತ್ತಿದೆ. ಬೆಳೆ ಬಾಡದಿರಲು ತುಂತುರು ನೀರಾವರಿ ಮೂಲಕ ನೀರನ್ನು ಹಾಯಿಸಿ ಬೆಳೆಯು ಹಾಳಾಗುವುದನ್ನು ತಡೆಯಬಹುದಾಗಿದೆ. ಸ್ಪ್ರಿಂಕ್ಲರ್​ ಅಗತ್ಯ ಇರುವವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಹಾಕಿದರೆ ಒಂದು ವಾರದೊಳಗೆ ಸ್ಪ್ರಿಂಕ್ಲರ್​ ವಿತರಿಸಲಾಗುತ್ತದೆ. ಶಿವರಾಜ್​ಕುಮಾರ್​ ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ

ಕಳೆದ ಪ್ರಸ್ತುತ ಮಾರುಕಟ್ಟೆಯಲ್ಲಿ ಎಳನೀರು ಹಾಗೂ ತೆಂಗಿನಕಾಯಿಗೆ ಬಂಪರ್​ ಬೆಲೆ ಬಂದಿದೆಯಾದರೂ ನಮ್ಮ ಸೀಮೆಯ ರೈತರು ಕೊಬ್ಬರಿ ಉತ್ಪಾದಿಸುವುದನ್ನು ಪ್ರತಿಷ್ಠೆ ಎಂದೇ ಭಾವಿಸಿದ್ದಾರೆ. ಅಟ್ಟದಲ್ಲಿ ಕಾಯಿ ಹಾಕಿ ವರ್ಷಪೂರ್ತಿ ಕಾದು ಕೊಬ್ಬರಿ ಮಾಡದೆ ತೋಟದಲ್ಲಿ ಎಳನೀರು, ಕಾಯಿ ಮಾರಾಟ ಮಾಡಿದರೆ ಅವಮಾನ ಎಂಬ ಮನಸ್ಥಿತಿ ಸಾಂಪ್ರದಾಯಿಕ ತೆಂಗು ಬೆಳೆಯುವ ಜನರಲ್ಲಿದೆ. ಆದರೆ, ಬೇರೆ ಜಿಲ್ಲೆಯ ತೆಂಗು ಬೆಳೆಗಾರರು ಎಳನೀರು, ಕಾಯಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಪ್ರಸನ್ನ ರಾಗಿಬೆಳೆಗಾರ ಕಂಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net