ಆರಿದ್ರಾ ಮಳೆ ಆರ್ಭಟ ಜೋರು

SDP LOSS
Published on

ಸಿದ್ದಾಪುರ: ತಾಲೂಕಿನಾದ್ಯಂತ ನಿರಂತರವಾಗಿ ಮಳೆ-ಗಾಳಿ ಜೋರಾಗಿದ್ದು ಆರಿದ್ರಾ ಮಳೆಯ ಆರ್ಭಟ ಜೋರಾಗಿದೆ. ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗಿನವರೆಗೆ 96.4 ಮಿಮೀ ಮಳೆ ಬಿದ್ದು ದಾಖಲಾಗಿದೆ.

ತಾಲೂಕಿನಲ್ಲಿ ಇಂದಿನವರೆಗೆ 1207.4 ಮಿಮೀ ಮಳೆ ಬಿದ್ದಿದೆ. ವಿಪರೀತ ಮಳೆ-ಗಾಳಿಯಿಂದಾಗಿ ತಾಲೂಕಿನಾದ್ಯಂತ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದ್ದು, ಹೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹರಸಾಹಸ ಪಡುತಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲೆಯಲ್ಲಿ ಜನ ಕಾಲಕಳೆಯುವಂತಾಗಿದೆ.

ತಾಲೂಕಿನಲ್ಲಿ ಈ ವರ್ಷ ಇಂದಿನವರೆಗೆ 522 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು 10 ಟಿಸಿ ಹಾಳಾಗಿದೆ ಎಂದು ಹೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ಹಲವು ಗ್ರಾಮೀಣ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಹಾಗೂ ಜನರ ಓಡಾಟಕ್ಕೆ ಅಡಚಣೆ ಉಂಟಾಗಿದೆ. ತಾಲೂಕಿನ ಗೊಳಿಕೈ ಭರತಕುಮಾರ ಶ್ರೀಪತಿ ಹೆಗಡೆ ಅವರ ಸ್ನಾನದ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net