ಸಂಪೂರ್ಣ ಕೈಕೊಟ್ಟ ಮಳೆ, ಆತಂಕದಲ್ಲಿ ಜನ

CLK BARAGALA 15
Published on

ಚಳ್ಳಕೆರೆ: ತಾಲೂಕಿನಲ್ಲಿ 2015ರಲ್ಲಿ ತಲೆದೋರಿದ್ದ ಬರಗಾಲ ಈ ವರ್ಷ ಮತ್ತೆ ಪುನರಾವರ್ತನೆಯಾಗಿದೆ . ಶೇಂಗಾ ಬೆಳೆದು ಬದುಕು ಕಟ್ಟಿಕೊಳ್ಳುವ ಕೃಷಿಕರ ಕನಸು ಚಿದ್ರವಾಗಿದೆ.

ಮುಂಗಾರು ಕೈಕೊಟ್ಟ ಕಾರಣ ಮಳೆಯಾಶ್ರಿತ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬಿತ್ತನೆ ಮಾಡಲಾಗಿದ್ದ 72,600 ಹೆಕ್ಟರ್ ಶೇಂಗಾ, 6215 ಹೆಕ್ಟರ್ ತೊಗರಿ, 745 ಹೆ. ಸಿರಿಧಾನ್ಯ, 140 ಹೆ. ರಾಗಿ, 5625 ಹೆ. ಮೆಕ್ಕೆಜೋಳ ಸೇರಿ ಶೇ.90ರಷ್ಟು ಬೆಳೆ ನಷ್ಟವಾಗಿವೆ.

ಮುಂಚೆ ಬಿತ್ತನೆಯಾಗಿದ್ದ ಶೇಂಗಾ ಸಂಪೂರ್ಣ ಒಣಗಿದೆ. ಒಂದು ತಿಂಗಳು ತಡವಾಗಿ ಬಿತ್ತನೆ ಮಾಡಿದ ಬೆಳೆ ಇಳುವರಿ ಇಲ್ಲದೆ ಸೊರಗಿದೆ. ಸಾಲದ ಸುಳಿಗೆ ಸಿಲುಕಿರುವ ಕೃಷಿಕರಿಗೆ ಸಕಾಲಕ್ಕೆ ಪರಿಹಾರ ಮತ್ತು ವಿಮೆ ಹಣ ಪಾವತಿಸುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ.

ಮಳೆಯ ಕೊರತೆಯಿಂದ ಸುಮಾರು 10 ವರ್ಷಗಳಿಂದ ನಿರೀಕ್ಷಿತ ಶೇಂಗಾ ಬೆಳೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಭೇಟಿ: ತೋಟಗಾರಿಕೆ, ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳಾದ ಪ್ರಭುದೇವ್, ಅಕ್ಷತಾ ಪಾಟೀಲ್, ಎಂ.ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಅಶೋಕ್ ಅವರು ಪಗಡಲಬಂಡೆ, ತಿಮ್ಮನಹಳ್ಳಿ, ಕರೀಕೆರೆ, ದೊಡ್ಡ ಉಳ್ಳಾರ್ತಿ ಭಾಗದ ಜಮೀನುಗಳಿಗೆ ಭೇಟಿ ಮಾಡಿ ಶೇಂಗಾ ಬೆಳೆ ಪರಿಶೀಲಿಸಿದ್ದಾರೆ.

ಉದ್ಯೋಗ ಖಾತ್ರಿ: ರೈತರಿಗೆ ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಪಂಚಾಯಿತಿಗಳ ಹಂತದಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.- ಕೆ.ಜಗದೀಶ್ ಸೂರನಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ, ಚಳ್ಳಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net