ರೈಲ್ವೆ ಗೇಟ್ ಇನ್ನೂ ಸಂಚಾರ ಮುಕ್ತ

24KDR1
Published on

ಕಡೂರು: ಪಟ್ಟಣದ ಹಳೇ ಕೆಎಂ ರಸ್ತೆಯ ರೈಲ್ವೆ ಗೇಟ್ ಬಳಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ಸಮಸ್ಯೆಗೆ ಶೀಘ್ರ ಮುಕ್ತಿದೊರೆಯಲಿದ್ದು, ರೈಲ್ವೆ ಇಲಾಖೆ ಮೂಲಕ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ಕಾಮಗಾರಿಗೆ ನಡೆಸಲು 69.85 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ರೈಲ್ವೆಗೇಟ್ ಸಮೀಪ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ಕಾಮಗಾರಿ ನಡೆಯುವ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ಮಾರ್ಗದಲ್ಲಿ ಪ್ರತಿನಿತ್ಯ 90 ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ರೈಲ್ವೆ ಗೇಟ್ ಹಾಕುವುದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ಅಡಚಣೆಯಾಗಿತ್ತು. ಒಂದು ರೀತಿಯಲ್ಲಿ ಕಡೂರು ಪಟ್ಟಣವೇ ಎರಡು ಭಾಗವಾಗಿದೆ ಎಂಬ ಭಾವನೆ ಜನರಲ್ಲಿ ಕಾಡುತ್ತಿದ್ದು. ಈ ಸಮಸ್ಯೆ ಪರಿಹಾರವಾಗಬೇಕೆಂಬ ಬೇಡಿಕೆಗೆ ಕೇಂದ್ರ ರೈಲ್ವೆ ಸಚಿವರಿಂದ ಸೂಕ್ತ ಸ್ಪಂದನೆ ದೊರಕಿರುವುದು ಸಂತಸದ ಸಂಗತಿ ಎಂದರು.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಪಟ್ಟಣದಲ್ಲಿ ಆಗುತ್ತಿದ್ದ ಸಮಸ್ಯೆ ಬಗ್ಗೆ ವಿವರಿಸಿ ಮನವಿ ಸಲ್ಲಿಸಿದ್ದರ ಫಲವಾಗಿ ಏಪ್ರಿಲ್‌ನಲ್ಲಿ ರೈಲ್ವೆ ಮಂಡಳಿ ಸಭೆಯಲ್ಲಿ ಕಡೂರು ಪಟ್ಟಣದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಮತ್ತು ಅಂಡರ್‌ಪಾಸ್ ಕಾಮಗಾರಿಗೆ 69.85 ಕೋಟಿ ಮಂಜೂರಾತಿ ನೀಡಿದ್ದಾರೆ. ಈ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ಮೈಸೂರು ವಿಭಾಗೀಯ ಕಚೇರಿಯಿಂದ ಜಿಲ್ಲಾಧಿಕಾರಿಗೆ ಪತ್ರ ರವಾನೆಯಾಗಿದೆ. ಜಿಲ್ಲಾಧಿಕಾರಿಗಳು ಶೀಘ್ರ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯ ರೈಲ್ವೆ ಖಾತೆ ಸಚಿವರು ಕರ್ನಾಟಕದವರೇ ಅಗಿರುವುದರಿಂದ ಅವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡುವ ಚಿಂತನೆ ಹೊಂದಲಾಗಿದೆ. ಕಡೂರು ಪಟ್ಟಣದ ಅಭಿವೃದ್ದಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net