ನಮಗೆ ಹುದ್ದೆ ಸಿಗೋದ್ಯಾವಾಗ ಚುನಾವಣೆಯಲ್ಲಿ ದುಡಿದ ಕಾಂಗ್ರೆಸ್‌ ಮುಖಂಡರ ಪ್ರಶ್ನೆ

congress-
Published on

ಕಾರವಾರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಜಿಲ್ಲಾ, ತಾಲೂಕು ಮಟ್ಟದ ವಿವಿಧ ಹುದ್ದೆಗಳಿಗೆ ಇದುವರೆಗೂ ಸರ್ಕಾರ ನಾಮ ನಿರ್ದೇಶನ ಮಾಡದ ಬಗ್ಗೆ ಸ್ಥಳೀಯ ನಾಯಕರು, ಕಾರ್ಯಕರ್ತರಲ್ಲಿ ಅಸಮಾಧಾನ ಕೇಳಿ ಬಂದಿದೆ.
ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಹಿಂದಿನ ಸರ್ಕಾರ ಮಾಡಿದ ನಾಮ ನಿರ್ದೇಶನಗಳನ್ನು ರದ್ದು ಮಾಡಲಾಗುತ್ತದೆ. ತಮಗೆ ಬೇಕಾದವರನ್ನು, ಪಕ್ಷ ಬೆಳವಣಿಗೆಗಾಗಿ ದುಡಿದವರಿಗೆ ನಿಗಮ, ಮಂಡಳಿ ಅಥವಾ ಇತರ ಹುದ್ದೆಗಳಿಗೆ ನೇಮಕ ಮಾಡುವ ರೂಢಿ ಮೊದಲಿನಿಂದಲೂ ಇದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಹಿಂದಿ ಸರ್ಕಾರದ ಎಲ್ಲ ನಾಮ ನಿರ್ದೇಶನಗಳನ್ನು ರದ್ದು ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸುಮಾರು 10, ತಾಲೂಕು ಹಾಗೂ ಕ್ಷೇತ್ರ ಮಟ್ಟದಲ್ಲಿ ಸುಮಾರು 50 ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಸಹಜವಾಗಿಯೇ ಮುಖಂಡರು, ಕಾರ್ಯಕರ್ತರು ತಮಗ್ಯಾವುದೋ ಹುದ್ದೆ ಸಿಗಬಹುದು ಎಂದು ಸಚಿವರು, ಶಾಸಕರ ಹಿಂದೆ ಬಿದ್ದಿದ್ದಾರೆ. ಕೆಲವರು ಕೆಡಿಎ, ಡಿಸಿಸಿ ನಿರ್ದೇಶಕ ಸ್ಥಾನದಂಥ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ಹಲವು ತಿಂಗಳ ಬಳಿಕ ಈಗ ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮಾತ್ರ ಚಾಲನೆ ದೊರಕಿದೆ. ಜಿಲ್ಲಾ ಮಟ್ಟದ ಹುದ್ದೆಗಳಿಗೆ ನಾಮ ನಿರ್ದೇಶನ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿದ್ದು, ಇದು ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ. ಎಂಎಲ್‌ಎ ಆಗಿಯಾಯ್ತು, ಕೆಲವರು ಸಚಿವರೂ ಆದರು, ಈಗ ತಮ್ಮನ್ನು ಗೆಲ್ಲಿಸಲು ದುಡಿದವರ ಋಣ ತೀರಿಸುವ ಅವಕಾಶ ಅವರಿಗಿದೆ. ಅಲ್ಲದೆ ಸದ್ಯ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಗಳಿವೆ. ಈಗಲೇ ಹುದ್ದೆಗಳನ್ನು ನೀಡಿದರೆ, ಜವಾಬ್ದಾರಿ ಹೊತ್ತವರು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ಹಲವು ಮುಖಂಡರಿಗೆ ಹುದ್ದೆಗಳನ್ನು ಒದಗಿಸಿಕೊಡಬಹುದಾಗಿದೆ. ಆದರೆ, ಸರ್ಕಾ ನಿಧಾನ ಗತಿಯಾಗಿದೆ. ಶಾಸಕರು ಸಚಿವರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಮುಖಂಡರೊಬ್ಬರು ವಿಜಯವಾಣಿ ಜತೆ ಪಕ್ಷದೊಳಗಿನ ತಮ್ಮ ಗೋಳು ತೋಡಿಕೊಂಡರು.
ಯಾವ್ಯಾವ ಹುದ್ದೆಗಳು..?
ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಹುದ್ದೆ, ಹಾಲು ಒಕ್ಕೂಟದ ನಾಮ ನಿರ್ದೇಶಿತ ಸದಸ್ಯ, ಜಿಲ್ಲಾ ಕೆಡಿಪಿ ಸದಸ್ಯ ಸ್ಥಾನಕ್ಕೆ ಸಾಮಾನ್ಯ, ಎಸ್‌ಸಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿ ಒಟ್ಟು 8 ಹುದ್ದೆಗಳು, ಜಿಲ್ಲಾ ಆರೋಗ್ಯ ಸಮಿತಿಗೆ 6 ಹುದ್ದೆಗಳು, ಜಿಲ್ಲಾ ಹಾಪ್ ಕಾಮ್ಸ 1 ಹುದ್ದೆಗಳನ್ನು ಜಿಲ್ಲಾ ಮಟ್ಟದಲ್ಲಿ ಸರ್ಕಾರ ನಾಮ ನಿರ್ದೇಶನ ಮಾಡಲು ಅವಕಾಶವಿದೆ.
ಇನ್ನು ತಾಲೂಕು ಮಟ್ಟದಲ್ಲಿ ಕಾರವಾರ ನಗರಾಭಿವೃದ್ಧಿ ಹಾಗೂ ಶಿರಸಿಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಹುದ್ದೆ, ಪ್ರತಿ ಪ್ರಾಧಿಕಾರಕ್ಕೆ ಐದು ಸದಸ್ಯರನ್ನು ನೇಮಕ ಮಾಡಬೇಕಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಪಟ್ಟಣ ಆಶ್ರಯ ಸಮಿತಿಗೆ ನಾಲ್ವರು, ಗ್ರಾಮೀಣ ಆಶ್ರಯ ಸಮಿತಿಗೆ ನಾಲ್ವರನ್ನು, ಕ್ಷೇತ್ರದ ಆರಾಧನಾ ಸಮಿತಿಗೆ ನಾಲ್ವರನ್ನು ಶಾಸಕರು ನಾಮ ನಿರ್ದೇಶನ ಮಾಡಬೇಕಿದೆ. ತಾಲೂಕು ಭೂ ನ್ಯಾಯ ಮಂಡಳಿಗಳಿಗೆ ನಾಲ್ವರು, ತಾಲೂಕು ಅಕ್ರಮ ಸಕ್ರಮ ಸಮಿತಿಗೆ ಮೂವರು, ತಾಲೂಕು ಕೆಡಿಪಿ ಸಮಿತಿಗೆ 6 ಜನ, ಎಪಿಎಂಸಿಗಳಿಗೆ ತಲಾ 3 ನಾಮ ನಿರ್ದೇಶಿತ ಸದಸ್ಯರು, ಪಿಎಲ್‌ಡಿ ಬ್ಯಾಂಕ್‌ಗೆ 1 ಟಿಎಪಿಸಿಎಂಎಸ್‌ಗೆ-3, ತಾಲೂಕು ಮಟ್ಟದ ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿಗೆ 6, ಪ್ರಾಥಮಿಕ ಆರೋಗ್ಯ ಕೇಂದ್ರದ ಸಲಹಾ ಸಮಿತಿಗೆ 6 ಸದಸ್ಯರ ನೇಮಕಕ್ಕೆ ಅವಕಾಶವಿದೆ.

ನಿಗಮ, ಮಂಡಳಿಗಳಿಗೆ ಸದ್ಯಕ್ಕೆ ಶಾಸಕರನ್ನು ಮಾತ್ರ ನೇಮಕ ಮಾಡಲಾಗುವುದು ಎಂಬ ಸುದ್ದಿ ಇದೆ. ಜಿಲ್ಲೆ, ತಾಲೂಕು ಮಟ್ಟದ ಹುದ್ದೆಗಳಿಗೆ ಸರ್ಕಾರ ನಾಮ ನಿರ್ದೇಶನ ಮಾಡಬಹುದಾದ ಕೆಲ ಹುದ್ದೆಗಳ ಪಟ್ಟಿಯನ್ನು ಕೆಪಿಸಿಸಿಯಿಂದ ಕಳಿಸಲಾಗಿದೆ. ಪಕ್ಷಕ್ಕಾಗಿ ದುಡಿದವರ ಪಟ್ಟಿಯನ್ನು ಮಾಡಿ ಶೀಘ್ರವೇ ಶಿಫಾರಸು ಮಾಡಲಾಗುವುದು.ಸಾಯಿನಾಥ ಗಾಂವಕರ್ಡಿಸಿಸಿ ಅಧ್ಯಕ್ಷ………

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net