

ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು ಮೂಲ ಯೋಜನೆಯಂತೆ ಮುಂಬರುವ ಮಳೆಗಾಲದೊಳಗೆ ಪೂರ್ಣಗೊಳಿ ಸುವುದು ಮತ್ತು ಹೊನ್ನಾವರ-ತಾಳಗುಪ್ಪ, ಅಂಕೋಲಾ-ಶಿರಸಿ ರಸ್ತೆಯ ನಿರ್ವಹಣಾ ಕಾಮಗಾರಿಗಳನ್ನು ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನ. 7ರ ಬಳಿಕ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಲ್ಲಿನ ತಾಲೂಕು ಸೌಧದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ವಿವಿಧ ಉಪವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ಕರೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಿಂದ ಈವರೆಗೆ ರಾ.ಹೆ. 66ರ ಚತುಷ್ಪಥ ಕಾಮಗಾರಿಯಲ್ಲಿ 7.84 ಕಿಮೀ ಕಾಮಗಾರಿ ಇನ್ನೂ ಬಾಕಿ ಇದೆ. ಸಾಕಷ್ಟು ವಿಳಂಬ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಬಾಕಿ ಇರುವ ಕಾಮಗಾರಿಯಲ್ಲಿ ಪರಿಹಾರ, ವ್ಯಾಜ್ಯ, ದಾಖಲೆ ಕೊರತೆ, ತಕರಾರು ಇನ್ನಿತರ ಹಲವು ಸಮಸ್ಯೆಗಳು ಇದೆ. ಕುಮಟಾ ಪಟ್ಟಣ ವ್ಯಾಪ್ತಿಯಲ್ಲೂ 1.91 ಕಿಮೀ ಕಾಮಗಾರಿಗೆ ಹಲವು ಅಡ್ಡಿಗಳಿವೆ. ಆದರೂ ಅದೆಲ್ಲವನ್ನೂ ಬಗೆಹರಿಸಿ ಮಳೆಗಾಲದೊಳಗೆ ಕಾಮಗಾರಿ ಮುಗಿಸುವ ಬಗ್ಗೆ ಇಂದಿನ ಸಭೆಯಲ್ಲಿ ರ್ಚಚಿಸಿ ನಿರ್ಣಯಿಸಲಾಗಿದೆ.
ಒಟ್ಟಾರೆ ರಾ.ಹೆ. 66ರ ಚತುಷ್ಪಥ ಕಾಮಗಾರಿಯ ಮೂಲ ಯೋಜನೆಯಂತೆ ಎಲ್ಲ ಕಾಮಗಾರಿಯನ್ನೂ ಪೂರ್ಣಗೊಳಿಸಿ, ಹೆಚ್ಚುವರಿಯಾಗಿ ಅಲ್ಲಲ್ಲಿ ಮೇಲ್ಸೇತುವೆ, ಸರ್ವೀಸ್ ರಸ್ತೆ, ಸೇತುವೆಯಂತಹ ಜನರ ಬೇಡಿಕೆಯನ್ನು ಪರಿಗಣಿಸಿ ಹೊಸ ಪ್ರಸ್ತಾವನೆ ಗಳನ್ನು ಕಳುಹಿಸಲಾಗುವುದು. ಆದರೆ, ಮೊದಲು ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಜನರು ಸಹಕರಿಸಬೇಕು. ಕೇಂದ್ರ ಸರ್ಕಾರದ ಸಹಕಾರದಲ್ಲಿ ಸಾಧ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹಾಗೆಯೇ ಅತಿವೃಷ್ಟಿಯಿಂದ ಸಾಕಷ್ಟು ಹಾನಿಗೊಳಗಾದ ಅಂಕೋಲಾ-ಹುಬ್ಬಳ್ಳಿ ಮತ್ತು ಹೊನ್ನಾವರ-ತಾಳಗುಪ್ಪಾ ರಸ್ತೆಯ ಹೊಂಡ, ಧೂಳು ನಿರ್ವಹಣೆಗೆ, ದುರಸ್ತಿ ಕಾರ್ಯವನ್ನು ನ. 7ರಿಂದ ನಡೆಸಲಾಗುವುದು. ಕೆಲವೆಡೆ ಅಗತ್ಯವಿರುವಲ್ಲಿ ಮರುಡಾಂಬರೀಕರಣ ಕಾರ್ಯವನ್ನೂ 3-4 ತಿಂಗಳೊಳಗೆ ಮಾಡಿ ಮುಗಿಸಲಾಗುವುದು. ಕುಮಟಾ-ಶಿರಸಿ ರಸ್ತೆಯಲ್ಲಿ ಭೂಪರಿಹಾರ ಕುರಿತ 87 ಪ್ರಕರಣಗಳಲ್ಲಿ 7-8 ಪ್ರಕರಣಗಳು ಮಾತ್ರ ಬಾಕಿ ಇವೆ. ಪರಿಹಾರ ಕೊಡಲು ನಾವು ಸಿದ್ಧರಿದ್ದೇವೆ, ಆದರೆ, ಫಲಾನುಭವಿಗೆ ತಾಂತ್ರಿಕ ಸಮಸ್ಯೆಯಿಂದ ಅಡ್ಡಿಯಾಗಿದೆ. ಈ ರಸ್ತೆಯಲ್ಲಿ ಪ್ರಮುಖವಾದ ಸೇತುವೆಗಳ ನಿರ್ವಣವಾಗಬೇಕಿದೆ. ರಸ್ತೆ ಸಂಪೂರ್ಣ ಬಂದ್ ಮಾಡಿ ಕಾಮಗಾರಿ ನಡೆಸುವುದಕ್ಕೆ ಅನುಮತಿ ಸಿಕ್ಕಿದೆ. ಆದರೆ, ಉಳಿದೆಲ್ಲ ಕಾಮಗಾರಿಗಳು ಮುಗಿದು, ಕೇವಲ ರಸ್ತೆ ಬಂದ್ ಮಾಡಲೇಬೇಕಾದ ಅನಿವಾರ್ಯ ಕಾಮಗಾರಿ ನಡೆಸುವ ಸಮಯದಲ್ಲಿ ಮಾತ್ರ ರಸ್ತೆ ಬಂದ್ ಮಾಡಬೇಕೆಂದು ಸೂಚಿಸಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ದಿನಾಂಕ ಪ್ರಕಟಿಸಲಿದ್ದಾರೆ ಎಂದರು.
ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಇತರರಿದ್ದರು.
ಬೈಪಾಸ್ಗೆ ಹಲವು ತಕರಾರು
ಕುಮಟಾದಲ್ಲಿ ಬೈಪಾಸ್ ಕುರಿತು ಸ್ಪಷ್ಟಪಡಿಸಿದ ಸಂಸದ ಕಾಗೇರಿ, ಚತುಷ್ಪಥದ ಮೂಲ ಯೋಜನೆಯಲ್ಲಿ ಬೈಪಾಸ್ ವಿಚಾರ ಇರಲಿಲ್ಲ. ನಂತರ ಜನರ ಬೇಕು-ಬೇಡಗಳಿಂದಾಗಿ ವಿವಾದ ಸೃಷ್ಟಿಯಾಗಿದೆ. ಹೆದ್ದಾರಿ ಪ್ರಾಧಿಕಾರ ಪ್ರಸ್ತಾವನೆಗೆ ಮಂಜೂರಿ ನೀಡಿದ್ದರೂ ಹಲವರ ತಕರಾರಿನಿಂದ ನಿಂತಿದೆ. ಆದರೆ, ಬೈಪಾಸ್ ಅಗತ್ಯತೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಇರಲಿದೆ. ಈ ಬಗ್ಗೆ ಬೇಕು-ಬೇಡ ರ್ಚಚಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಏನೇ ಇದ್ದರೂ ಇಲ್ಲಿನ ಬೈಪಾಸ್ಗೂ ಚತುಷ್ಪಥ ಕಾಮಗಾರಿ ವಿಳಂಬಕ್ಕೂ ಸಂಬಂಧವಿಲ್ಲ. ಈಗಿರುವ ಮಾರ್ಗದಲ್ಲಿ ಚತುಷ್ಪಥ ಕಾಮಗಾರಿ ನಡೆದು ಮುಂಬರುವ ಮಳೆಗಾಲದೊಳಗೆ ಜನರ ಸುರಕ್ಷತೆಗಾಗಿ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಜನ ಸಹಕರಿಸಬೇಕು ಎಂದರು.