ದೇಶದ ಸಂಪತ್ತು ರಕ್ಷಿಸುವುದೇ ಆರ್‌ಎಸ್‌ಎಸ್ ಉದ್ದೇಶ

hnd 22-1 rss
ಹುನಗುಂದ ಪಟ್ಟಣದ ಶ್ರೀ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಸಮಾರೋಪ ಸಮಾರಂಭದಲ್ಲಿ ಪ್ರಭು ಹೂಗಾರ ಮಾತನಾಡಿದರು. ಮಹಾಂತಯ್ಯ ಗಚ್ಚಿನಮಠ ಇದ್ದರು.
Published on

ಹುನಗುಂದ: ಧಾರ್ಮಿಕ ವ್ಯವಸ್ಥೆ, ಕೌಟುಂಬಿಕ ಸಂಬಂಧ, ಆಹಾರ ಪದ್ಧತಿ, ಸಾಮಾಜಿಕ ಸಾಮರಸ್ಯ ಸೇರಿ ವಿವಿಧ ದೇಶದ ಸಂಪತ್ತನ್ನು ರಕ್ಷಿಸಿ ಮುನ್ನಡೆಸುವುದೇ ಸ್ವಯಂ ಸೇವಕ ಸಂಘದ ಉದ್ದೇಶವಾಗಿದೆ ಎಂದು ವಿಜಯಪುರ ವಿಭಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ವಕ್ತಾರ ಪ್ರಭು ಹೂಗಾರ ಹೇಳಿದರು.

ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಪಥಸಂಚಲನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬ್ರಿಟಿಷರು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ನಮ್ಮನ್ನು ಆತ್ಮಬಲ ಹೇಡಿ ಎಂದು ನಿರೂಪಿಸಿದಾಗ ಸಹಿಸದ ಸಂಘ- ಸಂಸ್ಥಾಪಕರು ಯುವಕರಿಗೆ ಹನುಮಂತ ದೇವರ ಮತ್ತು ಶಿವಾಜಿ ಭಾವಚಿತ್ರವಿಟ್ಟು ವ್ಯಾಯಾಮ ಶಾಲೆ, ಸಜ್ಜನರ ಸಂಘಟನೆ, ಭೌದ್ಧಿಕಮಟ್ಟ ಬೆಳೆಸುವ ಸಾಮಾಜಿಕ ಕ್ರೀಡೆಗಳು, ಸ್ವದೇಶಿ ವಸ್ತುಗಳ ಬಳಕೆ ಹೀಗೆ ನಾವು ನಮ್ಮವರೆಂಬ ಭಾವನೆಗೆ ಶಕ್ತಿ ನೀಡುವ ಉದ್ದೇಶದಿಂದ ಸ್ವಯಂ ಸೇವಾ ಸಂಘ ಸ್ಥಾಪಿಸಲಾಯಿತು. ದೇಶದ ಪದ್ಧತಿಗಳನ್ನು ಸಮಾಜ ಪಾಲಿಸುವಂತೆ ಮಾಡಿದ್ದು ಸ್ವಯಂ ಸೇವಾ ಸಂಘ. ಒಂದು ರಾಜ್ಯದಲ್ಲಿ ಸ್ಥಾಪಿಸಿ ಆರಂಭಿಸಿದ ಈ ಸಂಘವು ದೇಶದ ಎಲ್ಲ ರಾಜ್ಯಗಳ ಮತ್ತು ಜಿಲ್ಲೆಗಳಲ್ಲಿ ಸ್ಥಾಪಿತವಾಗಿ ಈಗ ವಲಯಮಟ್ಟಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಯುವಕರನ್ನು ಸಂಘಟಿಸಿ ರಾಷ್ಟ್ರಿಯ ಸ್ವಯಂ ಸೇವಕರಿಂದ ಸಾಮಾಜಿಕ ವ್ಯವಸ್ಥೆ ಸರಿಪಡಿಸಲಾಗುವುದು.

ಸ್ವಯಂ ಪ್ರೇರಣೆಯಿಂದ ನನ್ನನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿ ಸ್ವಯಂ ಸೇವಕರು ಕಾರ್ಯೋನ್ಮುಖರಾಗುವಂತೆ ಮಾಡುವ ಉದ್ದೇಶವಿದೆ ಎಂದರು.

ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯ ವಹಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಂಡ ಭಾರತವು ಸನಾತನ ಹಿನ್ನೆಲೆ ಕೇಶವ ಬಲರಾಂ ಹೆಡಗೆವಾರ ಅವರು ಧರ್ಮದ ಉಳಿವು ಮತ್ತು ರಕ್ಷಣೆ, ಸಂಪ್ರದಾಯ, ಆಚಾರ- ವಿಚಾರ ಉಳಿವಿಗಾಗಿ ಈ ಸಂಘ ಸ್ಥಾಪಿಸಿದರು. ರಾಷ್ಟ್ರದಲ್ಲಿ ಅಂದಾಜು 60 ಸಾವಿರಕ್ಕೂ ಹೆಚ್ಚು ರಾಷ್ಟ್ರಿಯ ಸ್ವಯಂ ಸೇವಕರಿದ್ದಾರೆ. ದೇಶದ ಉಳಿವಿಗಾಗಿ ಈ ಸಂಘಟನೆಗೆ ಪ್ರತಿಯೊಬ್ಬರೂ ಸಹಾಯ ಸಹಕಾರ ಮತ್ತು ಪಕ್ಷಾತೀತವಾಗಿ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಭೀಮಾಶಂಕರ ಅಲಸಂಗಿ ಧ್ವಜಾರೋಹಣ ನೆರವೇರಿಸಿದರು.

ಮಹೇಶ ಹೊಸಮನಿ ನಿರೂಪಿಸಿದರು. ಜಿಲ್ಲಾ ಶಾರೀರಿಕ ಪ್ರಮುಖ ಮಂಜುನಾಥ ಯಮನಾಳ ನಿರೂಪಿಸಿದರು.

ಶ್ರೀನಿವಾಸ ಲಮಾಣಿ ಭಕ್ತಿಗೀತೆ ಹಾಡಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಡಾ. ಮಹಾಂತೇಶ ಕಡಪಟ್ಟಿ, ವೀರೇಶ ಉಂಡೋಡಿ, ಮಹೇಶ ಬೆಳ್ಳಿಹಾಳ, ರಾಜಕುಮಾರ ಬಾದವಾಡಗಿ, ಶಾಂತಪ್ಪ ಹೊಸಮನಿ, ಮಹಾಂತಗೌಡ ತೊಂಡಿಹಾಳ, ಆನಂದಗೌಡ ಪಾಟೀಲ, ಲಕ್ಷ್ಮಣ ಗಾಯಕವಾಡ, ವೀರೇಶ ಕುರ್ತುಕೋಟಿ, ಮಲ್ಲು ಚೂರಿ, ಅಪ್ಪು ಆಲೂರ, ಪ್ರವೀಣ ಹಳಪೇಟಿ, ಶಿವು ಭಾವಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net