

ಬೀರೂರು: ನುಡಿದಂತೆ ನಡೆಯುವುದರ ಜತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಉದ್ದೇಶವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದ ಸಂಗೊಳ್ಳಿ ರಾಯಣ್ಣ ರಂಗಮಂಟಪದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಬೀರೂರು ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರ ಬದುಕು ಬದಲಾಗಬೇಕು, ಮಹಿಳೆಯರು ಸ್ವಾವಲಂಬಿಯಾಗಬೇಕು ಎಂದು ರಾಜ್ಯ ಸರ್ಕಾರ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಈ ನಡೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ತಜ್ಞರ ಗಮನ ಸೆಳೆದು, ಇಂದು ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅಧ್ಯಯನದ ವಸ್ತುವಾಗಿದೆ. ಈ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಟೀಕೆಗಳಲ್ಲಿ ಹುರುಳಿಲ್ಲ. ಸುಮಾರು 60 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಜತೆಗೆ ಎಲ್ಲ ಇಲಾಖೆಗಳಿಗೆ ಹಿಂದಿನ ಸರ್ಕಾರಗಳಿಗಿಂತ ಅನುದಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಅಭಿವೃದ್ಧಿ ಕುಂಠಿತ ಎನ್ನುವ ವಾದದಲ್ಲಿ ಅರ್ಥವಿಲ್ಲ. ವಿರೋಧಿಗಳ ಟೀಕೆಗೆ ಬಜೆಟ್ ಮೂಲಕ ಮುಖ್ಯಮಂತ್ರಿ ಉತ್ತರಿಸಿದ್ದಾರೆ ಎಂದು ಹೇಳಿದರು.
ಕಡೂರು ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಫಲಾನುಭವಿಗಳಿಗೆ ಆಡಳಿತಾತ್ಮಕ ಸಮಸ್ಯೆ ನಿವಾರಣೆಗೆ ಜನಸ್ಪಂದನ ಅಭಿಯಾನ ನೆರವಾಗಿದೆ. ಸರ್ಕಾರವು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮೇಲ್ವಿಚಾರಣೆ ಸಲುವಾಗಿ ಪ್ರಾಧಿಕಾರ ರಚಿಸಿದೆ. ರಾಜ್ಯಮಟ್ಟದಿಂದ ತಾಲೂಕುಮಟ್ಟದವರೆಗೂ ಸಮಿತಿಗಳಿವೆ. ಕಡೂರು ತಾಲೂಕಿನಲ್ಲಿ ಎಒ ಪ್ರವೀಣ್ಕುಮಾರ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದು, ಪ್ರಾಧಿಕಾರ ಕೆಲಸ ಆರಂಭಿಸಲಿದೆ ಎಂದರು.
ತಾಲೂಕು ಪಂಚಾಯಿತಿ ಇಒ ಪ್ರವೀಣ್, ಬೀರೂರು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಸದಸ್ಯರಾದ ಬಿ.ಆರ್.ರವಿಕುಮಾರ್, ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್, ಲೋಕೇಶಪ್ಪ, ಸಮೀವುಲ್ಲಾ, ಜ್ಯೋತಿ ಸಂತೋಷ್, ಜ್ಯೋತಿ ವೆಂಕಟೇಶ್, ರೋಹಿಣಿ ವಿನಾಯಕ, ಮೋಹನಕುಮಾರ್, ಸರಸ್ವತಿಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ಹುಲ್ಲೇಹಳ್ಳಿ ಗ್ರಾಪಂ ಅಧ್ಯಕ್ಷ ಲೋಕೇಶಪ್ಪ, ಮುಖಂಡ ಬೀರೂರು ದೇವರಾಜ್ ಇತರರಿದ್ದರು.
ನೋಂದಣಿಗೆ ಡೆಡ್ಲೈನ್
ಕಡೂರು ತಾಲೂಕು ಅತ್ಯಂತ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಸೋಮವಾರ ಸಂಜೆಯೊಳಗೆ ತಾಲೂಕಿನಲ್ಲಿ ನೀರು ಪೂರೈಸುವ ಟ್ಯಾಂಕರ್ ಹೊಂದಿದವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಮಸ್ಯೆಯಾದರೆ ಪರಿಹರಿಸಲು ಸಹಾಯವಾಣಿ 08267-221210 ಸ್ಥಾಪಿಸಿದ್ದು, ಎಲ್ಲಿ ಸಮಸ್ಯೆ ಇದ್ದರೂ ಸಂಪರ್ಕಿಸುವಂತೆ ಕಡೂರು ತಹಸೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದರು.