ಶಿಕ್ಷಣದ ಉದ್ದೇಶ ವ್ಯಕ್ತಿತ್ವ ವಿಕಸನ ಹೊರತು ಕೇವಲ ಫಲಿತಾಂಶವಲ್ಲ

Headmaster's meeting
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಜಿಪಂ ಸಿಇಒ ಎನ್.ಹೇಮಂತ್ ಉದ್ಘಾಟಿಸಿದರು. ಎಸ್.ಆರ್.ಮಂಜುನಾಥ, ಕೆ.ಆರ್.ಬಿಂಬ, ರಮೇಶ್, ಕೆ.ಎಲ್.ಲೋಕೇಶ್, ಎಚ್.ಆರ್.ಕೃಷ್ಣಮೂರ್ತಿ, ಸಿ.ಎಸ್.ರಾಘವೇಂದ್ರ, ಪುಷ್ಪಾ ಇದ್ದರು.
Published on

ಶಿವಮೊಗ್ಗ: ಶಿಕ್ಷಣ ಇರುವುದು ವ್ಯಕ್ತಿತ್ವ ವಿಕಸನಕ್ಕಾಗಿಯೆ ಹೊರತು ಕೇವಲ ಫಲಿತಾಂಶ ಪಡೆಯುವುದಕ್ಕಲ್ಲ. ಆದರೆ ಇಂದಿನ ಶಿಕ್ಷಣ ಎಂಬುದು ಫಲಿತಾಂಶಕ್ಕೆ ಸೀಮಿತವಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸುವ ಸಂಬಂಧ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶೇ.100ರಷ್ಟು ಹಾಜರಾತಿ, ಗುಂಪು ಕಲಿಕೆ, ವಿಶೇಷ ತರಗತಿ ಸೇರಿ ಕಲಿಕಾ ವ್ಯವಸ್ಥೆಯಲ್ಲಿ ಸಾಮಾನ್ಯ. ಅದನ್ನು ಹೊರತುಪಡಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಬಗ್ಗೆ ಮುಂದಿನ ನಾಲ್ಕು ತಿಂಗಳಲ್ಲಿ ಶಾಲೆಗಳಲ್ಲಿ ಇಡಬೇಕಿರುವ ಹೆಜ್ಜೆಗಳ ಬಗ್ಗೆ ಶಿಕ್ಷಕರು, ಮುಖ್ಯ ಶಿಕ್ಷಕರು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.

ಜಿಲ್ಲಾದ್ಯಂತ ಶೈಕ್ಷಣಿಕವಾಗಿ ಸಂಪನ್ಮೂಲಗಳ ಕೊರತೆ ಇಲ್ಲ. ಡಿಸೆಂಬರ್ 15ರೊಳಗೆ ಪಠ್ಯಗಳನ್ನು ಪೂರ್ಣಗೊಳಿಸಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಫಲಿತಾಂಶ ಮತ್ತಷ್ಟು ಸುಧಾರಣೆ ಕಾಣಬೇಕು. ಕಳೆದ ಬಾರಿ ರ‌್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದು ಈ ಸಲ ಮೊದಲ ಸ್ಥಾನಕ್ಕೆ ಬರಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ನಾನು ಒಂದರಿಂದ ನಾಲ್ಕನೇ ತರಗತಿವರೆಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಓದಿದೆ. ಆನಂತರ ಕನ್ನಡ ಶಾಲೆಯಲ್ಲೇ ಓದಿದೆ. ಇಂಜಿನಿಯರಿಂಗ್ ಶಿಕ್ಷಣವನ್ನೂ ಸರ್ಕಾರಿ ಕಾಲೇಜಿನಲ್ಲೇ ಪಡೆದಿದ್ದೇನೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿರುವ ಸಂಪನ್ಮೂಲಗಳ ಬಗ್ಗೆ ಅರಿವು ನನಗಿದೆ. ಗುಣಮಟ್ಟದ ಫಲಿತಾಂಶವನ್ನು ಪಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಡಿಡಿಪಿಐ (ಆಡಳಿತ) ಎಸ್.ಆರ್.ಮಂಜುನಾಥ, ಡಿಡಿಪಿಐ (ಅಭಿವೃದ್ಧಿ) ಕೆ.ಆರ್.ಬಿಂಬ, ಬಿಇಒಗಳಾದ ರಮೇಶ್, ಕೆ.ಎಲ್.ಲೋಕೇಶ್, ಎಚ್.ಆರ್.ಕೃಷ್ಣಮೂರ್ತಿ, ಶಿವಮೊಗ್ಗ ಜಿಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net