

ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಇತ್ತೀಚೆಗೆ ಉತ್ತಮ ಮಳೆಬೀಳುತ್ತಿರುವುದರಿಂದ ರೈತರು ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ.
ಇಷ್ಟು ದಿನ ಮಳೆ ಬೀಳುವುದೋ ಇಲ್ಲವೋ ಎಂಬ ಆತಂಕದಲ್ಲಿಯೇ ಇದ್ದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ತಮ್ಮ ಆಧಾರ್, ಆರ್.ಟಿ.ಸಿ. ಮುಂತಾದ ದಾಖಲೆಗಳನ್ನು ಒದಗಿಸಿ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ.
ಇಷ್ಟು ವರ್ಷ ಕೃಷಿ ಇಲಾಖೆಯು ಪೂರ್ವ ಮುಂಗಾರು ಮಳೆ ಬೀಳುವವರೆಗೂ ಬಿತ್ತನೆ ಬೀಜ ಸಂಗ್ರಹ ಮಾಡದ ಸಂದರ್ಭದಲ್ಲಿ ಮಳೆಬಿದ್ದ ಕೂಡಲೇ ಎಲ್ಲ ರೈತರೂ ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ ಈ ಬಾರಿ ಕೃಷಿ ಇಲಾಖೆ ಮಾರ್ಚ್ ಅಂತ್ಯದಲ್ಲಿಯೇ ಸೂರ್ಯಕಾಂತಿ, ಅಲಸಂದೆ, ಉದ್ದು, ಹೆಸರು ಬಿತ್ತನೆ ಬೀಜಗಳನ್ನು ಪಟ್ಟಣ, ತೆರಕಣಾಂಬಿ, ಹಂಗಳ ಹಾಗೂ ಬೇಗೂರು ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದೆ.
ಕಸಬಾ ಹೋಬಳಿಯ ಶಿಂಡನಪುರ, ಚಿಕ್ಕತುಪ್ಪೂರು, ಕೆಲಸೀಪುರ, ಹಂಗಳ ಹೋಬಳಿಯ ಬೊಮ್ಮಲಾಪುರ, ಚೌಡಹಳ್ಳಿ, ಬಾಚಹಳ್ಳಿ, ತೆರಕಣಾಂಬಿ ಹೋಬಳಿಯ ಲಕ್ಕೂರು, ಗುರುವಿನಪುರ ಮುಂತಾದ ಗ್ರಾಮಗಳಿಗೆ ಸೋಮವಾರ ಮಧ್ಯರಾತ್ರಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಇದರಿಂದ ಈ ಭಾಗದ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ.
ಏಪ್ರಿಲ್ ಆರಂಭದಿಂದಲೇ ಮಳೆಬಿದ್ದಿದ್ದರೆ ತಾಲೂಕಿನ ಬಹುತೇಕ ರೈತರು ಸೂರ್ಯಕಾಂತಿ ಬಿತ್ತನೆ ಮಾಡುತ್ತಿದ್ದರು. ಕಳೆದ ವರ್ಷ ಕೃಷಿ ಇಲಾಖೆ 900 ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಮಾಡಿತ್ತು. ತಾಲೂಕಿನ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಾರಿ ಇಲ್ಲಿಯವರೆಗೆ ಕೇವಲ 8 ಟನ್ ಮಾತ್ರ ವಿತರಣೆ ಮಾಡಲಾಗಿದೆ. ಸದ್ಯ ನಡೆಯುತ್ತಿರುವ ಭರಣಿ ಮಳೆ ಕಳೆದರೆ ರೈತರು ಸೂರ್ಯಕಾಂತಿ ಬದಲು ಮುಸುಕಿನ ಜೋಳ ಬಿತ್ತನೆಯತ್ತ ಮುಖ ಮಾಡಲಿದ್ದಾರೆ.
ಆದರೆ ಮಳೆ ಬೀಳುವುದು ಸುಮಾರು ಒಂದು ತಿಂಗಳು ವಿಳಂಬವಾಗಿದ್ದರಿಂದ ಹೆಚ್ಚಿನ ರೈತರು ಮುಸುಕಿನ ಜೋಳ ಬಿತ್ತನೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಬಿತ್ತನೆ ಬೀಜ ಮಾರಾಟವಾಗುವ ಲಕ್ಷಣಗಳಿವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.