ಐಐಎಸ್ಸಿಯಲ್ಲಿ ವಿಜ್ಞಾನ ಕೌತುಕ ಕಣ್ತುಂಬಿಕೊಂಡ ಸಾರ್ವಜನಿಕರು

IISC
Published on

ಬೆಂಗಳೂರು: ಕೃತಕ ಬುದ್ಧಿಮತ್ತೆ ಬಳಸಿ ಹೊಸ ತಂತ್ರಜ್ಞಾನದ ಲಾಭ, ಮಿದುಳು ಕಾರ್ಯನಿರ್ವಹಣೆಯ ಅಧ್ಯಯನ ಮಾಹಿತಿ, ರೋಬೋಟಿಕ್ ಪ್ರಾಣಿಗಳು, ವಂಶವಾಹಿಗಳ 3ಡಿ ಮಾದರಿ, ನ್ಯಾನೋ ತಂತ್ರಜ್ಞಾನದಿಂದ ಸೂಕ್ಷ್ಮ ಪರಿಕರಗಳ ಕಾರ್ಯಾಚರಣೆ ನಡೆಯುವುದು ಹೇಗೆ ?

ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಮಕ್ಕಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ವಿಜ್ಞಾನಿಗಳ ಮುಂದಿಟ್ಟರು. ಇದಕ್ಕೆ ಅಷ್ಟೇ ಸಾವಧಾನವಾಗಿ ಉತ್ತರ ನೀಡಿ ವಿಜ್ಞಾನ ಲೋಕದ ಒಳ-ಹೊರಗನ್ನು ತಿಳಿಸಿ ಅವರಲ್ಲಿ ವಿಜ್ಞಾನ ಕಲಿಕೆಗೆ ಪ್ರೇರಣೆ ನೀಡುವ ಪ್ರಸಂಗ ಐಐಎಸ್ಸಿ ಮುಕ್ತ ದಿನದಲ್ಲಿ ಹೇರಳವಾಗಿ ಕಂಡವು.

ದೇಶದ ಮುಂಚೂಣಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಎನಿಸಿರುವ ಭಾರತೀಯ ವಿಜ್ಞಾನ ಕೇಂದ್ರಕ್ಕೆ (ಐಐಎಸ್ಸಿ) ಸಾಮಾನ್ಯ ಜನರು ಪ್ರವೇಶಿಸಲು ಆಗದು. ವಿಜ್ಞಾನದ ಬಗ್ಗೆ ಕುತೂಹಲ ಇದ್ದವರು ಸಣ್ಣ ಮಾಹಿತಿ ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಇದಕ್ಕೆ ತೆರೆ ಎಳೆದು ಸಾಮಾನ್ಯರಿಗೂ ಸಂಸ್ಥೆಯಲ್ಲಿ ಕೈಗೊಳ್ಳುವ ಸಂಶೋಧನೆ ಹಾಗೂ ಅವುಗಳ ಲವನ್ನು ಹೇಗೆ, ಯಾರು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಒದಗಿಸಲು ಇತ್ತೀಚಿನ ದಿನಗಳಲ್ಲಿ ವರ್ಷಕ್ಕೊಮ್ಮೆ ‘ಐಐಎಸ್ಸಿ ಮುಕ್ತ ದಿನ’ ಆಚರಿಸಲಾಗುತ್ತಿದೆ.

ಶನಿವಾರ ನಡೆದ ಮುಕ್ತ ದಿನಕ್ಕೆ ರಾಜಧಾನಿಯ ವಿವಿಧ ಬಡಾವಣೆಗಳಲ್ಲದೆ ನೆರೆಯ ಜಿಲ್ಲೆಗಳಿಂದ ವಿಜ್ಞಾನಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಧ್ಯಾಹ್ನದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರಿಂದ ಐಐಎಸ್ಸಿ ಜಾತ್ರಯಾಗಿ ಪರಿಣಮಿಸಿತು. ಇದರ ನಡುವೆಯೇ ವೀಕ್ಷಕರು ಸಂಸ್ಥೆಯ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿನ ಮುಖ್ಯಸ್ಥರು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಇಂತಹ ಅವಕಾಶ ಸಿಕ್ಕಿದ್ದಕ್ಕೆ ಹೆಚ್ಚಿನವು ಖುಷಿಪಟ್ಟರು ಮನೆಗೆ ಹಿಂದಿರುಗಿದರು.

ಗಮನ ಸೆಳೆದ ಪ್ರಾತ್ಯಕ್ಷಿಕೆ, ಪ್ರಯೋಗ:

ಐಐಎಸ್ಸಿಯ 35ಕ್ಕೂ ಹೆಚ್ಚು ವಿಭಾಗಗಳಲ್ಲಿ ವಿಜ್ಞಾನದ ವಿವಿಧ ಶಾಖೆಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಾಗಿದೆ. ಇವುಗಳ ಬಗ್ಗೆ ಪ್ರಮುಖವಾದವುಗಳನ್ನು ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತಿಳಿಸಿಕೊಡುವ ಯತ್ನ ನಡೆಯಿತು. ಕೆಲ ಪ್ರಯೋಗಗಳಿಗೂ ಜನರು ಸಾಕ್ಷಿಯಾದರು. ಹೆಚ್ಚಿನ ವಿದ್ಯಾರ್ಥಿಗಳು ರೋಬೋಟಿಕ್ ಪ್ರಾಣಿಗಳ ಬಗ್ಗೆ ಮಾಹಿತಿಗೆ ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net