

ಸಕಲೇಶಪುರ: ನಿತ್ಯ ನೂರಾರು ಜನರು ಬಳಸುವ ಸಾರ್ವಜನಿಕರ ಶೌಚಗೃಹ ಕಾಲಿಡದಷ್ಟು ಗಬ್ಬೆದ್ದು ನಾರುತ್ತಿದೆ.
ಐದು ವರ್ಷಗಳ ಹಿಂದೆ ಹಲವು ಮನವಿಗಳ ನಂತರ ಪುರಸಭೆ ಕಚೇರಿ ಹಿಂಭಾಗ ಹಾಗೂ ಉಪವಿಭಾಗಾಧಿಕಾರಿ ಕಚೇರಿ ಎದುರು ಇರುವ ಸ್ಥಳದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಹೈಟೇಕ್ ಶೌಚಗೃಹ ನಿರ್ಮಾಣ ಮಾಡಲಾಗಿತ್ತು. ಆದರೆ ನಿರ್ವಹಣೆ ಮಾಡುವವರು ಯಾರು ಎಂಬ ಜಿಜ್ಞಾಸೆಯಿಂದ ನಿರ್ಮಾಣಗೊಡರೂ ಮೂರು ವರ್ಷ ಉಪಯೋಗಕ್ಕೆ ಮುಕ್ತಗೊಂಡಿರಲಿಲ್ಲ.
ಈ ಬಗ್ಗೆ ಹಲವು ಟೀಕೆಗಳು ವ್ಯಕ್ತವಾದ ನಂತರ ಕಳೆದ ಎರಡು ವರ್ಷಗಳ ಹಿಂದೆ ಪುರಸಭೆಯೇ ನಿರ್ವಹಣೆ ಹೊಣೆ ಹೊತ್ತು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿತ್ತು. ಆದರೆ ಒಂದು ವರ್ಷಗಳ ಕಾಲ ವಾರಕ್ಕೊಮ್ಮೆ ಸ್ವಚ್ಛತೆ ನಡೆಸುತ್ತಿದ್ದ ಪುರಸಭೆ ಆಡಳಿತ ಕಳೆದೊಂದು ವರ್ಷದಿಂದ ಸ್ವಚ್ಛತೆ ಕೈಗೊಳ್ಳುವುದನ್ನು ಕೈಬಿಟ್ಟಿದೆ. ಪರಿಣಾಮ ಶೌಚಗೃಹದ ನೀರಿನ ಪೈಪ್ ಒಡೆದು ಅಡಿಗಳಷ್ಟು ನೀರು ಶೌಚಗೃಹದೊಳಗೆ ಸಂಗ್ರಹವಾಗಿರುವ ಕಾರಣ ಶೌಚಗೃಹಕ್ಕೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ಯೂರಿನರ್ಸ್ ಸಮೀಪಕ್ಕೂ ಸುಳಿಯದಂತೆ ವಾತಾವರಣ ಗಬ್ಬೆದಿದ್ದರೆ, ಶೌಚಗೃಹದೊಳಗೆ ಕುಳಿತು ಹೊರಬರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ವ್ಯವಸ್ಥಾಪಕರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಗೃಹದ ಆಧೋಗತಿ ತಲುಪಿದ ಪರಿಣಾಮ ಉಪವಿಭಾಗಾಧಿಕಾರಿ ಕಚೇರಿ, ಪುರಸಭೆ, ತಾಲೂಕು ಪಂಚಾಯಿತಿ, ತಾಲೂಕು ಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕ್‌ಗೆ ಬರುವ ಸಾರ್ವಜನಿಕರು ದೇಹಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ.