

ಸರಗೂರು: ಅಂತರಸಂತೆಯ ಯುವಪಡೆಯು ಗ್ರಾಮದಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ತಿಳಿಸಿದರು.
ಅಂತರಸಂತೆ ಗ್ರಾಮದಲ್ಲಿ ಆಯೋಜಿಸಿದ್ದ ಯುವಪಡೆ ಸಂಘಟನೆಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಯುವಪಡೆಯು ಸಕ್ರಿಯವಾಗಿದ್ದು, ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಯುವಕರಿಂದ ನಿರ್ಮಾಣವಾಗಿರುವ ಈ ಸಂಘಟನೆ ತನ್ನ 4ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ನೌಕರ ವಿ.ನಾಗರಾಜು ಮಾತನಾಡಿ, ಅಂತರಸಂತೆ ಯುವಪಡೆ ಸಂಘಟನೆಯು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರನ್ನು ಬೆಂಬಲಿಸುತ್ತಿದೆ ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ ಮೈಸೂರು ಅಮರಶಿಲ್ಪಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಗೂ ಯುವಪಡೆಯ ಸದಸ್ಯ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಡಿ.ಸುರೇಶ್ ಕುಮಾರ್, ಮುಖಂಡರಾದ ಎ.ವಿ.ರಾಜಪ್ಪ, ಪುಟ್ಟಸ್ವಾಮಿ, ಸುಬ್ರಹ್ಮಣ್ಯ, ರಾಜಣ್ಣ, ಮಹದೇವಪ್ಪ, ದೇವಣ್ಣ, ಎ.ಪಿ.ಕೃಷ್ಣ, ಸುಬ್ರಮಣ್ಯ, ಎಂ.ಜಯಣ್ಣ, ಕುಮಾರ, ಅಭಿ, ಶಿವಾರ್ಚಕ ಸತೀಶ್ ಮತ್ತು ಯುವಪಡೆ ಸದಸ್ಯರು ಇದ್ದರು.