ಅಬ್ಬರಿಸಿದ ವರುಣ ಜನಜೀವನ ಅಸ್ತವ್ಯಸ್ತ

SGN RAIN EFFECT
Published on

ಶಿಗ್ಗಾಂವಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಭಾನುವಾರ ಮತ್ತು ಸೋಮವಾರ ಸುರಿದ ಅಬ್ಬರದ ಮಳೆಯಿಂದಾಗಿ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಕೆಲ ಬಡಾವಣೆಗಳವರು ಪರದಾಡುವಂತಾಯಿತು. ಕಟಾವಿಗೆ ಬಂದ ಬೆಳೆಗಳೆಲ್ಲ ನೀರಲ್ಲಿ ನಿಂತು ಹಾನಿಗೀಡಾಗಿದ್ದರಿಂದ ರೈತರನ್ನು ಕಂಗಾಲಾಸಿತು.

ಪಟ್ಟಣದ ಮಾರುತಿನಗರ, ಅಂಬೇಡ್ಕರ್​ನಗರ ಸೇರಿ ಹೊಸ ಬಸ್ ನಿಲ್ದಾಣದ ಸರ್ವಿಸ್ ರಸ್ತೆ, ಅಂಜುಮನ್ ಶಾದಿಮಹಲ್ ಪಕ್ಕದ ರಸ್ತೆಗಳು ಜಲಾವೃತಗೊಂಡು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮ್ಯಾಗೇರಿ ಓಣಿ, ಮಾರುತಿನಗರದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿ, ಜಲದಿಗ್ಬಂದನಗೊಂಡು ಜನರು ರಾತ್ರಿ ನಿದ್ದೆಯಿಲ್ಲದೆ ಭಯದಲ್ಲಿಯೆ ಕಾಲ ಕಳೆಯಬೇಕಾಯಿತು. ಇಲ್ಲಿರುವ 15 ಕುಟುಂಬಗಳನ್ನು ತಾತ್ಕಾಲಿಕವಾಗಿ ಜಗಜೀವನರಾಮ್ ಸಭಾಭವನದಲ್ಲಿ ಉಳಿದುಕೊಳ್ಳಲು ಸ್ಥಳೀಯ ಪುರಸಭೆ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟರು.

ಪಟ್ಟಣದಲ್ಲಿ ಮೂರು ಮನೆಗಳು ಕುಸಿದು ಧರಾಶಾಹಿಯಾಗಿವೆ. ಅಂಬೇಡ್ಕರ್​ನಗರದ ಮನೆ ಕುಸಿದಿದ್ದರಿಂದ ವಿದ್ಯಾಶ್ರೀ ಭಜಂತ್ರಿ ಎಂಬುವವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮೀನು ಜಲಾವೃತ:

ರೈತರ ಜಮೀನುಗಳು ಜಲಾವೃತಗೊಂಡು ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾಬೀನ್ ಮತ್ತು ಭತ್ತ ಬೆಳೆ ಹಾನಿಗೀಡಾಗಿವೆ. ಹಳ್ಳದ ಇಕ್ಕೆಲದಲ್ಲಿರುವ ಜಮೀನುಗಳಲ್ಲಿ ಬೆಳೆದು ಕಿತ್ತು ಬಣವೆ ಹಾಕಿದ್ದ ಸೋಯಾಬೀನ್ ಬೆಳೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಶೇಂಗಾ ಮತ್ತು ಮೆಕ್ಕೆಜೋಳದ ಸ್ಥಿತಿ ಇದಕ್ಕೆ ಹೊರತಾಗಿಲ್ಲ.

ನಡುಗಡ್ಡೆಯಂತಾದ ಹಳ್ಳಿಗಳು

ತಾಲೂಕಿನ ಹಿರೇಬೆಂಡಿಗೇರಿ, ಬನ್ನೂರು, ಬನ್ನಿಕೊಪ್ಪ, ಹಿರೇಮಲ್ಲೂರ, ಚಿಕ್ಕಮಲ್ಲೂರ ಮಾರ್ಗದಲ್ಲಿನ ಹಿರೇಹಳ್ಳ ತುಂಬಿ ಹರಿಯುತ್ತಿದೆ. ನೀರಿನ ಹರಿವು ಹೆಚ್ಚಿದ್ದರಿಂದ ಹಿರೇಮಲ್ಲೂರ, ಚಿಕ್ಕಮಲ್ಲೂರು ಗ್ರಾಮಗಳು ಸಂಪೂರ್ಣ ನಡುಗಡ್ಡೆಯಂತಾಗಿ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಕಂಕನವಾಡ, ಹಿರೇಮಲ್ಲೂರ ಮಾರ್ಗ ಮೂಲಕ ಜೇಕಿನಕಟ್ಟಿ-ಸವಣೂರ ಸಂಪರ್ಕ ಕಲ್ಪಿಸುವ ರಸ್ತೆ, ಹಿರೇಮಲ್ಲೂರ ಮಧ್ಯದಲ್ಲಿ ತುಂಬಿ ಹರಿಯುವ ಹಳ್ಳದಿಂದ ಭಾನುವಾರದಿಂದ ಸೋಮವಾರರಾತ್ರಿವರೆಗೂ ರಸ್ತೆ ಸಂಪರ್ಕವಿಲ್ಲದೆ ವಾಹನ ಸವಾರರು ಪರದಾಡಿದರು.

ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ 43 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅದೃಷ್ವಶಾತ್ ಯಾವುದೇ ಜನ ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿಲ್ಲ. ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಶಿಥಿಲಗೊಂಡ ಮನೆ ನಿವಾಸಿಗಳು ಬೇರೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಬೆಳೆ ಹಾನಿ, ಮನೆ ಹಾನಿಗಳನ್ನು ಪರಿಶೀಲಿಸಲು ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಆಡಳಿತದ ಅಧಿಕಾರಿಗಳಿಗೆ ಸೂಚಿಸಲಾಗಿದೆ. | ಸಂತೋಷ ಹಿರೇಮಠ ತಹಸೀಲ್ದಾರ್, ಶಿಗ್ಗಾಂವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net