ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಟಿಟ್ಟ ಸಾರ್ವಜನಿಕರು

27-kollegal-7,,,,,
ಕೊಳ್ಳೇಗಾಲ ಪಟ್ಟಣದ ಉಪ ವಿಭಾಗ ಕಚೇರಿಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ಸಾರ್ವಜನಿಕರ ಬಳಿ ಅಹವಾಲು ಆಲಿಸಿದರು.
Published on

ಕೊಳ್ಳೇಗಾಲ: ಪಟ್ಟಣದ ಉಪವಿಭಾಗಧಿಕಾರಿ ಕಚೇರಿಗೆ ಮಂಗಳವಾರ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ ಸಾರ್ವಜನಿಕರು ಹಾಗೂ ಸಂಘಟನೆ ಮುಖಂಡರು ಸಮಸ್ಯೆಗಳ ಮನವಿ ಪತ್ರ ನೀಡಿದರು.

ನೀರಾವರಿ ಇಲಾಖೆಯ ಸಮಸ್ಯೆಗಳು, ಹಕ್ಕು ಪತ್ರ ಸಮಸ್ಯೆಗಳು, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ ಮನವಿ ಪತ್ರ ನೀಡಿ ರೈತರ ಸಮಸ್ಯೆಗಳ ಬಗ್ಗೆ ತಕ್ಷಣವೇ ಬಗೆಹರಿಸಿ ಎಂದು ರೈತರು ಮತ್ತು ಮುಖಂಡರು ಒತ್ತಾಯಿಸಿದರು.

ರೈತ ಮುಖಂಡ ದಶರತ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನಗಳಿಗೆ ಹಕ್ಕುಪತ್ರ ಕೊಡಲಾಗುತ್ತಿಲ್ಲ. ಸಾರ್ವಜನಿಕರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಇದರ ಬಗ್ಗೆ ಕ್ರಮವಹಿಸಬೇಕು. ಹಾಗೂ ಕುಪ್ಪಮ್ಮ ಕಾಲುವೆ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳ್ಳದೇ ಇರುವುದರಿಂದ ರೈತರ ಜಮೀನುಗಳಲ್ಲಿ ಕೊಳಚೆ ನೀರು ಬಂದು ವ್ಯವಸಾಯ ಮಾಡಲು ಸಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ನಗರಸಭಾ ಸದಸ್ಯೆ ಜಯಮೇರಿ ಮಾತನಾಡಿ, ಪಟ್ಟಣದ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಕಾಮಗಾರಿಯನ್ನು ನಗರಸಭೆಯವರು ಹಸ್ತಾಂತರ ಮಾಡಿಕೊಂಡಿದ್ದು, ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದೆ. ಇದರ ಬಗ್ಗೆ ಕ್ರಮವಹಿಸಬೇಕೆಂದು ತಿಳಿಸಿದರು.

ರೈತ ಮುಖಂಡ ಮೋಳೆ ರಾಮಕೃಷ್ಣ ಮಾತನಾಡಿ, ಕಬಿನಿ ನಾಲೆಗಳು ಒತ್ತುವರಿಯಾಗಿದ್ದು, ಇರುವ ನಾಲೆಗಳನ್ನು ದುರಸ್ತಿ ಮಾಡದೆ ನೀರು ಬಿಟ್ಟರೆ ರೈತರ ಜಮೀನುಗಳಿಗೆ ಹಾದು ಹೋಗುವುದರಿಂದ ಫಸಲು ನಷ್ಟವಾಗುತ್ತಿದೆ. ಪಟ್ಟಣದ ಸಂತೇಮಾಳ ಬಡಾವಣೆಯಲ್ಲಿ ಸಂತೆ ನಡೆಯುತ್ತಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನರೀಪುರ ಗ್ರಾಮದ ಬಳಿಯಿಂದ ಹರಳೆ, ಹಳೇ ಅಣಗಳ್ಳಿ, ದಾಸನಪುರ ಗ್ರಾಮಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ನಿತ್ಯವೂ ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಸ್ಥಳದಲ್ಲಿದ್ದ ತಹಸೀಲ್ದಾರ್ ಅವರಿಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕೊಳ್ಳೇಗಾಲದಲ್ಲೇ ಕರೆಯಿಸಿ ಸಭೆ ನಡೆಸಲು ಸಿದ್ಧತೆ ಮಾಡಿ ಆ ಸಭೆಗೆ ನಾನು ಬರುತ್ತೇನೆ. ಸಾರ್ವಜನಿಕರಿಗೂ ಸಹ ಆ ಸಭೆಗೆ ಆಹ್ವಾನ ನೀಡಿ. ಏನೇ ಸಮಸ್ಯೆ ಇದ್ದರೂ ಅಲ್ಲಿ ಬಗೆಹರಿಸೋಣ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ವಿಬಾಗಾಧಿಕಾರಿ ಮಹೇಶ್, ತಹಸಿಲ್ದಾರ್ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net