

ನಿಪ್ಪಾಣಿ: ಕ್ವಾರಂಟೈನ್‌ನಲ್ಲಿಟ್ಟಿದ್ದ 30 ಜನರಿಗೆ ಕರೊನಾ ವೈರಸ್ ತಗುಲಿದ್ದರೂ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ಸೋಂಕಿತರು ಅಜ್ಮೀರ್‌ನಿಂದ ಬಂದವರಾಗಿದ್ದಾರೆ. ಅವರು ನಿಪ್ಪಾಣಿ ತಾಲೂಕಿನ ಯಾರೊಂದಿಗೂ ಸಂಪರ್ಕದಲ್ಲಿಲ್ಲ. ಹಾಗಾಗಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ನಗರಸಭೆಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾನತಾಡಿದ ಅವರು, ಮೇ 3ರಂದು ಬಸ್ ಮೂಲಕ 38 ಜನರು ಕೊಗನೋಳಿ ಬಳಿ ಬಂದಾಗ ಪೊಲೀಸರು ನನ್ನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ಆದರೆ, ರಾಜ್ಯದ ಅನುಮತಿ ಇಲ್ಲದಿರುವುದರಿಂದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರನ್ನು ಕ್ವಾರಂಟೈನ್ ಮಾಡಲು ನಿರ್ಣಯಿಸಲಾಯಿತು.
ಕ್ವಾರಂಟೈನ್‌ನಲ್ಲಿ ಇದ್ದವರು ನಿಪ್ಪಾಣಿ ತಾಲೂಕಿನ ನಾಗರಿಕರೊಂದಿಗೆ ಯಾವುದೇ ಸಂಪರ್ಕವಿಲ್ಲ. ಆದಾಗ್ಯೂ ಸಂಪರ್ಕಕ್ಕೆ ಬಂದವರನ್ನು ಪೊಲೀಸರು ಹುಡುಕಿ ಕ್ವಾರಂಟೈನ್‌ನಲ್ಲಿ ಇಡಲಿದ್ದಾರೆ. ಮಾಸ್ಕ್ ಹಾಕಿಕೊಂಡು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಲಾಕ್‌ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಕುಮಾರ ಹಾಡಕರ ಮಾತನಾಡಿ, ಕರೊನಾ ಸೋಂಕು ದೃಢಪಟ್ಟವರು ವಿವಿಧೆಡೆ ಪ್ರವಾಸಿ ಮಂದಿರದಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬದೊಂದಿಗೆ ಅಜ್ಮೀರ್‌ಗೆ ತೆರಳಿದ್ದರು. ಸೋಂಕು ತಗುಲಿದ್ದರೂ ಅವರೆಲ್ಲ ಸದೃಢರಾಗಿದ್ದು, ಯಾರಿಗೂ ಯಾವುದೇ ತೊಂದರೆ ಇಲ್ಲ ಎಂದರು. ಎಂಜಿಎಂ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ನಿಪ್ಪಾಣಿ ನಗರಸಭೆ ಸದಸ್ಯ ಜಯವಂತ ಭಾಟಲೆ, ರಾಜು ಗುಂದೇಶಾ, ಪ್ರಣವ ಮಾನವಿ, ಮೋಹನ ಬುಡಕೆ ಇತರರು ಇದ್ದರು. ಪೌರಾಯುಕ್ತ ಮಹಾವೀರ ಬೋರಣ್ಣವರ ಸ್ವಾಗತಿಸಿ, ವಂದಿಸಿದರು.