ಹೊಸೂರಿನಲ್ಲಿ ಗಿರಿಜನರ ಪ್ರತಿಭಟನೆ ಅಂತ್ಯ

15 gkp 02
ಹೊಸೂರು ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರಾಮಚಂದ್ರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಕುಮಾರ್, ತಾಪಂ ಇಒ ಕೆ.ಸಿ.ಅಪ್ಪಣ್ಣ ಹಾಗೂ ವಿವಿಧ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು.
Published on

ಗೋಣಿಕೊಪ್ಪ: ಲೈನ್‌ಮನೆಯಲ್ಲಿ ವಾಸವಿರುವ ಗಿರಿಜನ ಕುಟುಂಬಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಮುಕ್ತಾಯವಾಗಿದೆ.


ಆದಿವಾಸಿಗಳ ಮುಖಂಡರಾದ ಗಪ್ಪು ಮುಂದಾಳತ್ವದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡುವಂತೆ ಹೋರಾಟ ಹಮ್ಮಿಕೊಂಡಿದ್ದರು. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನಿರ್ದೇಶನದ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ ವಿರಾಜಪೇಟೆ ತಾಲೂಕು ತಹಸೀಲ್ದಾರ್ ರಾಮಚಂದ್ರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ ಹಾಗೂ ವಿವಿಧ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.


ಹೊಸೂರು ಗ್ರಾಮದಲ್ಲಿರುವ 3 ಎಕರೆ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಲು ಐಟಿಡಿಪಿ ಇಲಾಖೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಪೊನ್ನಣ್ಣ ದೂರವಾಣಿ ಮೂಲಕ ನಿರ್ದೇಶನ ನೀಡಿದರು.

ಇಲಾಖೆಯ ಹೆಸರಿಗೆ ಜಾಗ ಮಂಜೂರು ಆದ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳುವುದಾಗಿ ಸ್ಥಳದಲ್ಲಿದ್ದ ಅಧಿಕಾರಿಗಳು ಭರವಸೆ ನೀಡಿದರು. ಶಾಸಕ ಹಾಗೂ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಗಿರಿಜನರು ತಮ್ಮ ಪ್ರತಿಭಟನೆ ಹಿಂಪಡೆದರು. ಕಂದಾಯ ನಿರೀಕ್ಷಕರಾದ, ಅನಿಲ್ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಆರಕ್ಷಕ ಸಿಬ್ಬಂದಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು. ಕಳೆದ 15 ದಿನಗಳಿಂದ ಗಿರಿಜನರು ನಿವೇಶನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net