ಧರ್ಮಸ್ಥಳದ ಅಪಪ್ರಚಾರ ಖಂಡನೀಯ

Published on

ಬಳ್ಳಾರಿ : ಶ್ರೀಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ, ನಾಡಿನ ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಪವಿತ್ರ ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಈಚೆಗೆ ಕೆಲವು ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ನಿರಂತರ ಸುಳ್ಳು ಸುದ್ದಿ ಮತ್ತು ಕಲ್ಪಿತ ಆರೋಪಗಳನ್ನು ಹರಡುತ್ತಿವೆ. ವ್ಯವಸ್ಥಿತ ಅಪಪ್ರಚಾರದಿಂದಾಗಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದ್ದು, ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟಾಗಿದೆ. ಇದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಬಂದರೇ ಹಿಂದು ಧಾರ್ಮಿಕ ಕೇಂದ್ರ ಟಾರ್ಗೆಟ್ ಮಾಡಲಾಗುತ್ತದೆ. ಅನಾಮಿಕ ಹೇಳಿದಂತೆ ರಾಜ್ಯ ಸರ್ಕಾರ ಯಾಕೆ ಕುಣಿಬೇಕು. ಷಡ್ಯಂತ್ರದ ವಿರುದ್ಧ ಯಾರಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಮೆರವಣಿಗೆಯು ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ನಡೆಯಿತು. ಉಳಿಸೋಣ ಉಳಿಸೋಣ ಧರ್ಮಸ್ಥಳ ಕ್ಷೇತ್ರವನ್ನು ಉಳಿಸೋಣ, ಧರ್ಮದ ರಕ್ಷಣೆ ಯಾರ ಹೊಣೆ ನಮ್ಮ ಹೊಣೆ, ಹಿಂದು ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರ ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net