ಶೋಷಿತರ ಪ್ರಗತಿ ಅಕ್ಷರದಲ್ಲಿ ಅಡಗಿದೆ

hsd valmiki samaja 24 p1
Published on

ಹೊಸದುರ್ಗ: ಅಹಿಂದ, ಶೋಷಿತ ವರ್ಗಗಳ ಸಮಗ್ರ ಪ್ರಗತಿ ಶಿಕ್ಷಣದಲ್ಲಿ ಅಡಗಿದೆ. ಈ ವಾಸ್ತವ ಸತ್ಯ ಅರಿತು ವಿದ್ಯಾಭ್ಯಾಸಕ್ಕೆ ಹೆಚ್ಚು ಮನ್ನಣೆ ನೀಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜ ಹಾಗೂ ನೌಕರರ ಸಾಂಸ್ಕೃತಿಕ ಸಂಘ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಗುರುತಿಸಿಕೊಂಡಿರುವ ವಾಲ್ಮೀಕಿ ಸಮಾಜದ ಪ್ರತಿ ಮಗುವಿಗೂ ಪಾಲಕರು ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ನಿರ್ವಹಿಸಬೇಕು. ಸಮಾಜದ ಅಭಿವೃದ್ಧಿಗಾಗಿ ವಾಲ್ಮೀಕಿ ಮಠ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಾಗುತ್ತಿದೆ. ಅಗತ್ಯ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಮುಂದಾಗಿದೆ ಎಂದರು.

ರಾಮಾಯಣ ರಚಿಸುವ ಮೂಲಕ ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳು ಬೇಡರ ಜಾತಿಯಲ್ಲಿ ಹುಟ್ಟಿರುವ ಕಾರಣಕ್ಕೆ ಪಟ್ಟಭದ್ರರ, ಜಾತಿವಾದಿಗಳ ತಿರಸ್ಕಾರಕ್ಕೆ ಕಾರಣವಾಗಿದ್ದಾರೆ. ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರೆ, ವಾಲ್ಮೀಕಿ ಮಹರ್ಷಿಗೆ ಮಂದಿರ ಕಟ್ಟುವ ಕೆಲಸ ಆಗದಿರುವುದು ನೋವಿನ ವಿಷಯ ಎಂದು ಹೇಳಿದರು.

ಬಿಜೆಪಿ ಸರ್ಕಾರ ನಾಯಕ ಸಮಾಜದ ಬಹುದಿನ ಬೇಡಿಕೆ ಮೀಸಲು ಸೌಲಭ್ಯ ಶೇ.7.5ಕ್ಕೆ ಹೆಚ್ಚಳ ಮಾಡಿ ಆದೇಶ ಮಾಡಿತು. ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿತು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಾಯಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪರವಾಗಿ ಇರುವ ಕಾರಣಕ್ಕೆ ಅವರಿಗೆ ಸಮಾಜದ ಬೆಂಬಲ ಇರಲಿದೆ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ ದೊರೆತರೆ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಅಂಕ ಗಳಿಕೆಯ ಶಿಕ್ಷಣದ ಜತೆಗೆ ನೆಲಮೂಲ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾಯಕ ಸಮುದಾಯದ ಬೆಂಬಲದಿಂದ ಶಾಸನ ಸಭೆ ಪ್ರವೇಶಿಸಿದ್ದೇನೆ. ವಾಲ್ಮೀಕಿ ಜನರ ಋಣ ತೀರಿಸುವ ಕೆಲಸಕ್ಕೆ ಬದ್ಧನಾಗಿದ್ದು, ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಜ ವೀರ ಮದಕರಿ ನಾಯಕ ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಟಿ.ರಂಗನಾಥ್, ಎಪಿಪಿ ರುದ್ರಮುನಿ, ಬಿಆರ್‌ಸಿ ಶ್ರೀನಿವಾಸ್, ಜಯಪ್ರಕಾಶ್, ರಂಗನಾಥ್ ವೆಂಗಲಾಪುರ, ತಿಪ್ಪೇಶ್, ರಂಗಪ್ಪ, ರವಿತೇಜ ವಾಲ್ಮೀಕಿ, ನಾಗರಾಜ್ ಕೊಂಡಜ್ಜಿ ಮತ್ತಿತರಿದ್ದರು.

ವಾಲ್ಮೀಕಿ ಹೆಮ್ಮೆ: ನಾಡಿನ ಒಳಿತಿಗಾಗಿ ಹಲವಾರು ವೀರ ಪುರಷರು, ಮಹಾತ್ಮರನ್ನು ಕೊಡುಗೆ ನೀಡಿರುವ ಹೆಮ್ಮೆ ವಾಲ್ಮೀಕಿ ಸಮಾಜಕ್ಕಿದೆ. ಲಿಂ.ಪುಣ್ಯಾನಂದಪುರಿ ಸ್ವಾಮೀಜಿ ಅವರ ಆಶಯ ಈಡೇರಿಸಲು ಪ್ರಸನ್ನಾನಂದ ಶ್ರೀಗಳು ನಡೆಸಿದ ನಿರಂತರ ಹೋರಾಟದಿಂದ ಮೀಸಲು ಸೌಲಭ್ಯ ಹೆಚ್ಚಳವಾಗಿದೆ.- ತುಂಬಿನಕೆರೆ ಬಸವರಾಜ್ ಉಪಾಧ್ಯಕ್ಷ, ರಾಜ್ಯ ವಾಲ್ಮೀಕಿ ಮಹಾಸಭಾದ ಯುವ ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net