

ಸಮಾಜದಲ್ಲಿ ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯನ್ನು ಕಿತ್ತೊಗೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಟ್ಟರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾಲೇಜಿನ 2023-24ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಾಮಾಜಿಕವಾಗಿ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಕಲೆಯಾಗಿ ಅರಳಿಸಬೇಕು. ಭ್ರಷ್ಟಾಚಾರ ದೇಶಕ್ಕೆ ಹಾನಿ, ಜಾತಿ ವ್ಯವಸ್ಥೆ ಸಮಾಜಕ್ಕೆ ಹಾನಿ. ಕ್ರೀಡೆಯಲ್ಲಿ ಜಾತಿಗೆ ಅವಕಾಶವಿಲ್ಲ. ಧರ್ಮದಲ್ಲಿ ಜಾತಿ ಸೇರಿಕೊಂಡರೆ ದೇಶದ ಅವನತಿಯಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರ ದೇಶದ ಪ್ರಗತಿ ಎಂದರು.
ವಿದ್ಯಾರ್ಥಿಗಳು ತಮ್ಮ ಅಂತಃಶಕ್ತಿ ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಬೇಕು. ಕನ್ನಡವನ್ನು ಓದುವುದು, ಬಳಸುವುದು ಮತ್ತು ಮಾತಾಡುವುದರ ಮೂಲಕ ಕನ್ನಡವನ್ನೂ ಉಳಿಸಬೇಕು. ಪರಮಪೂಜ್ಯ ರಾಜೇಂದ್ರ ಶ್ರೀಗಳವರ ದೂರದೃಷ್ಟಿಯ ಫಲವಾಗಿ ಕಾಲೇಜಿನಲ್ಲಿ ದೊರೆಯುತ್ತಿರುವ ಸೌಕರ್ಯಗಳನ್ನು ಸಾರ್ಥಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸುವ ಸಂಪನ್ಮೂಲ ಕೇಂದ್ರಗಳಾಗಬೇಕು. ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಬಹಳ ಮುಖ್ಯ. ವ್ಯಕ್ತಿತ್ವ ವಿಕಸನ, ಕ್ರೀಡಾ ಮನೋಭಾವ ಮತ್ತು ಶಿಸ್ತು ಬೆಳೆಸಿಕೊಳ್ಳಲು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವೇದಿಕೆಯಾಗುತ್ತವೆ ಎಂದರು.
ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಕನಸಿಗೆ ಆಡಚಣೆಯಿಲ್ಲದ ನಿದ್ರೆ ಬೇಕು. ಗುರಿಗೆ ನಿದ್ರೆಯೇ ಅಡಚಣೆ. ಪರಿಶ್ರಮ, ಚತುರತೆ, ಚುರುಕುತನ ಮತ್ತು ಸಂಘಟನಾತ್ಮಕ ಕಾರ್ಯ ನಿರ್ವಹಣೆಯ ಕಲೆಗಳು ಇದ್ದಾಗ ಮಾತ್ರ ಗುರಿಮುಟ್ಟುವುದು ಸುಲಭ. ಕನ್ನಡವನ್ನು ಉಳಿಸುವುದು, ಬೆಳೆಸುವುದು ಎಷ್ಟು ಮುಖ್ಯವೋ ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಇಂಗ್ಲಿಷ್ ಕಲಿಯುವುದೂ ಅಷ್ಟೇ ಮುಖ್ಯ ಎಂದರು.
ಕ್ರೀಡಾಪಟು ಎಂ.ವೀಣಾ ಮಾತನಾಡಿ, ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಬಹಳ ಮುಖ್ಯ. ಯಾವುದೇ ಕ್ಷೇತ್ರದಲ್ಲಾದರೂ ಸಾಧನೆಗೆ ಕೊನೆಯಿಲ್ಲ. ಸಾಧನೆಗೆ ಬಹಳ ಪರಿಶ್ರಮಬೇಕು. ಪರಿಶ್ರಮವನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.