ಪ್ರಜಾಭುತ್ವದ ಅರಿವು ಮೂಡಿಸಲು ಕಾರ್ಯಕ್ರಮ ಮಹತ್ವದ್ದು

The program is important for creating awareness about democracy
ಗದ್ದನಕೇರಿ ಕ್ರಾಸ್‌ನಲ್ಲಿ ಪುಟ್ಟ ಮಕ್ಕಳೊಂದಿಗೆ ಮಾನವ ಸರಪಳಿಗೆ ಶಾಸಕ ಜೆ.ಟಿ. ಪಾಟೀಲ ಕೈ ಜೋಡಿಸಿದರು. ಬೀಳಗಿ ತಾಲೂಕು ತಹಸೀಲ್ದಾರ್ ಸುಹಾಸ ಇಂಗಳೆ ಇತರರಿದ್ದರು.
Published on

ಕಲಾದಗಿ: ಅಸಮಾನತೆ ನಿವಾರಿಸಿ, ಭ್ರಾತೃತ್ವ ಬೆಳೆಸಲು ಎಲ್ಲರೂ ಒಂದಾಗಿ ಸಮಾನತೆಯಿಂದ ಹೆಜ್ಜೆ ಹಾಕಬೇಕು. ಪರಸ್ಪರ ಕೈಜೋಡಿಸಿ ನಾವೆಲ್ಲಾ ಒಂದೇ ಎಂಬ ಬಂಧುತ್ವ ಮೆರೆಯಬೇಕು. ಇದಕ್ಕೆಲ್ಲಾ ಬುನಾದಿಯಾಗಿರುವ ಸಂವಿಧಾನ ಅರ್ಥಮಾಡಿಕೊಂಡು ಪ್ರಜಾಪ್ರಭುತ್ವದ ಹೊಣೆಗಾರಿಕೆ ನೆನಪಿಸಿಕೊಂಡು ಆ ನಿಟ್ಟಿನಲ್ಲಿ ಮುಂದುವರಿಯುವುದು ನಮ್ಮ ಆದ್ಯ ಕರ್ತವ್ಯವಾಗಬೇಕೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ವಿಶ್ವ ಪ್ರಜಾಪ್ರಭುತ್ವದ ದಿನಾಚರಣೆ ನಿಮಿತ್ತ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮಾಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾನವ ಸರಪಳಿಗೆ ಕೈ ಜೋಡಿಸುವ ಕಾರ್ಯಕ್ರಮವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದಾಖಲೆಯ ಮಾನವಸರಪಳಿ ನಿರ್ಮಿಸುವ ಮೂಲಕ ಜನರಲ್ಲಿ ಪ್ರಜಾಭುತ್ವದ ಅರಿವು ಮೂಡಿಸಿ ಬಲ ತುಂಬಲು ಸದರಿ ಕಾರ್ಯಕ್ರಮ ಬಹಳ ಮಹತ್ವ ಪಡೆದಿದೆ ಎಂದರು.

ಬಳಿಕ ಸವಿನೆನಪಿಗಾಗಿ ಶಾಸಕರು ಸಸಿ ನೆಟ್ಟು, ಮಾನವ ಸರಪಳಿ ನಿರ್ಮಿಸಲು ಕೈಜೋಡಿಸಿದರು. ಮಾಜಿ ಸಚಿವ ಎಸ್.ಆರ್. ಪಾಟೀಲ ಅವರೂ ಮಾನವ ಸರಪಳಿಯಲ್ಲಿ ಕೈ ಜೋಡಿಸಿದರು. ನಾಡಗೀತೆ, ಸಂವಿಧಾನ ಪೀಠಿಕೆ ಓದು ಮಾಡಿಸಲಾಯಿತು.

ಯಡಹಳ್ಳಿ, ಗದ್ದನಕೇರಿ, ಸೀಮಿಕೇರಿ, ಮುರನಾಳ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು ಹಾಗೂ ಮುಖಂಡರು, ಜನಸಾಮಾನ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಬೀಳಗಿ ತಾಲೂಕು ತಹಸೀಲ್ದಾರ್ ಸುಹಾಸ ಇಂಗಳೆ ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಾಖಲೆಯ ಮಾನವ ಸರಪಳಿ ರಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net