ವಿದ್ಯುತ್ ಅವಘಡ ಹಿನ್ನೆಲೆ ಮೆರವಣಿಗೆ ರದ್ದು, ಮಹಾಮಂಡಳದ ಗಣೇಶ ಸಾಂಕೇತಿಕ-ಸರಳವಾಗಿ ವಿಸರ್ಜನೆ

MAHAMANDALA GANESHA VISARJANE
ವಿಜಯಪುರದಲ್ಲಿ ಗಜಾನನ ಮಹಾಮಂಡಳ ಗಣೇಶನ ಉತ್ಸವ ಮೂರ್ತಿಯ ವಿಸರ್ಜನೆ ಸಾಂಕೇತಿಕವಾಗಿ ನೆರವೇರಿತು.
Published on

ವಿಜಯಪುರ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಭವ್ಯ ಮೆರವಣಿಗೆ ಮೂಲಕ ಪ್ರತಿ ವರ್ಷ ಜಿಲ್ಲೆಯ ಗಮನ ಸೆಳೆಯುತ್ತಿದ್ದ ಗಜಾನನ ಮಹಾಮಂಡಳದ ಗಣೇಶ ಮೂರ್ತಿ ಮೆರವಣಿಗೆ ಈ ಬಾರಿ ಗುರುವಾರದಂದು ಸಾಂಕೇತಿಕವಾಗಿ ಸಾಂಗವಾಗಿ ನೆರವೇರಿತು.

ಇಲ್ಲಿನ ಮಹಾತ್ಮ ಗಾಂಧಿ ವೃತ್ತದ ಬಳಿಯ ಟಾಂಗಾ ನಿಲ್ದಾಣದ ಬಳಿ ರಾಮಪ್ರಸಾದ ಗಲ್ಲಿಯ ನಿವಾಸಿ ಶಿವಾಜಿ ಊರ್ಫ್ ಶುಭಂ ರಾಮದಾಸ ಸಂಕಪಾಲ್ (21) ಎಂಬಾತ ಗಣೇಶ ವಿಸರ್ಜನೆ ಸಂದರ್ಭ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಅಸುನೀಗಿದ್ದರಿಂದ ಈ ಬಾರಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಆಯೋಜಕರು ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಾಯಿತು. ಬಳಿಕ ತಾಜ್‌ಬಾವಡಿ ಬಳಿ ಇರುವ ಕೃತಕ ಹೊಂಡದಲ್ಲಿ ಮೂರ್ತಿ ವಿಸರ್ಜಿಸಲಾಯಿತು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಣೇಶೋತ್ಸವ ಹಿಂದುಗಳ ಆಚರಣೆಗಳಲ್ಲೇ ಶ್ರೇಷ್ಠವಾದುದು. ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲ್ಪಡುವ ಈ ಹಬ್ಬದಲ್ಲಿಯೇ ಈ ಬಾರಿ ವಿದ್ಯುತ್ ಅವಘಡ ಸಂಭವಿಸಿರುವುದು ಅತ್ಯಂತ ನೋವು ತರಿಸಿದೆ. ಮೃತನಾದ ಯುವಕನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಗಣೇಶನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮೊನ್ನೆ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ, ಈ ರೀತಿಯ ಘಟನೆಗಳು ಯಾವತ್ತೂ ನಡೆಯಬಾರದು, ಎಲ್ಲರಿಗೂ ಒಳಿತಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸುವೆ ಎಂದರಲ್ಲದೇ, ಸರ್ಕಾರ ಕೂಡಲೇ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟನೆಯಲ್ಲಿ ಗಾಯಗೊಂಡವರಿಗೂ ಸಹ ಸೂಕ್ತ ಪರಿಹಾರ ನೀಡಬೇಕೆಂದರು.

ಮಹಾಮಂಡಳದ ಅಧ್ಯಕ್ಷ ರಾಜು ಹುನ್ನೂರ, ಪ್ರಮುಖರಾದ ಸಂಜೀವ ಐಹೊಳಿ, ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ಧು ಮಲ್ಲಿಕಾರ್ಜುನಮಠ, ಅಪ್ಪು ಸಜ್ಜನ, ರಾಜು ಬಿರಾದಾರ, ಬಸವರಾಜ ಹಳ್ಳಿ, ರಾಜೇಂದ್ರ ವಾಲಿ, ಸಂಪತ್ ಕೋವಳ್ಳಿ, ಸತೀಶ ಪಾಟೀಲ್, ಆರ್.ಕೆ. ಸುರಪೂರ, ಸಂತೋಷ ಜಾಧವ, ಮಳುಗೌಡ ಪಾಟೀಲ, ವಿವೇಕ ತಾವರಗೇರಿ, ಅನಿಲ ಉಪ್ಪಾರ, ಸಂಗಮೇಶ ಹೌದೆ, ಮಹೇಶ ಜಾಧವ, ಸಂತೋಷ ಜಾಧವ, ಸತೀಶ ಪಾಟೀಲ, ಚಿನ್ನು ಚಿನಗುಂಡಿ, ಆನಂದ ಮುಚ್ಚಂಡಿ, ವಿಜಯ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net