

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಮೈದಾನದಿಂದ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರ ಬೃಹತ್ ಶೋಭಾಯಾತ್ರೆ ಭಾನುವಾರ ಅದ್ದೂರಿಯಾಗಿ ಜರುಗಿತು.
ಸಾರೋಟದಲ್ಲಿ ಪ್ರಸನ್ನರಾದ ಶ್ರೀಗಳನ್ನು ಮೆರವಣಿಗೆ ಮೂಲಕ ಕಾಳಮ್ಮನ ಅಗಸಿ ಶ್ರೀ ಶಂಕರಮಠದವರೆಗೆ ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಮಕ್ಕಳ ಭಜನೆ ಮತ್ತು ನೃತ್ಯ ಹೃನ್ಮನ ಸೆಳೆಯಿತು.
ಮಹಿಳಾ ಭಜನಾ ಮಂಡಳಿಗಳು ವಿವಿಧ ಭಜನೆ ಹಾಡುತ್ತ ದಾರಿಯುದ್ದಕ್ಕೂ ಸಾಗಿದರು. ಆದಿ ಶಂಕರಾಚಾರ್ಯ ವೇಷತೊಟ್ಟ ಮಗು ಸಹಿತ ಹಲವರು ವಿವಿಧ ವೇಷಭೂಷಣ ತೊಟ್ಟು ಗಮನ ಸೆಳೆದರು. ಕೆಸರಿ ಧ್ವಜಗಳು ಮೆರವಣಿಗೆ ಅಂದ ಹೆಚ್ಚಿಸಿದವು. ರಾಮ-ಕೃಷ್ಣರ ಹಾಡುಗಳು ಭಕ್ತಿಪರವಶಗೊಳಿಸಿದವು.
ಚಾಲನೆ: ಶಾಸಕ ಮಹೇಶ ಟೆಂಗಿನಕಾಯಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ದ್ರಾವಿಡ ಬ್ರಾಹ್ಮಣ ಸಂಘದ ಹುಬ್ಬಳ್ಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಕಾರ್ಯದರ್ಶಿ ವಾದಿರಾಜ ಭಟ್, ಡಾ.ಆರ್.ಎನ್. ಜೋಶಿ, ದತ್ತಮೂರ್ತಿ ಕುಲಕರ್ಣಿ, ಸಂಜೀವ ಜೋಶಿ, ಲಕ್ಷ್ಮಣ ಕುಲಕರ್ಣಿ, ಶಂಕರ ಪಾಟೀಲ, ರವಿ ನಾಯಕ, ಬಸವರಾಜ ಹೆಬಸೂರ, ಹನುಮಂತ ಡಂಬಳ, ಮನೋಹರ ಪರ್ವತಿ, ಬಿಂದುಮಾಧವ ಪುರೋಹಿತ ಇತರರು ಉಪಸ್ಥಿತರಿದ್ದರು.