ಮೈಸೂರು ವಿಮಾನ ನಿಲ್ದಾಣಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ಹೆಸರಿಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ‘ಟಿಪ್ಪು’ ಹೆಸರಿಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಸಂಸದ ಪ್ರತಾಪ್ ಸಿಂಹ

Mysore Airport
Published on

ಮೈಸೂರು: ಬಿಜೆಪಿ ಸರ್ಕಾರ ಇದ್ದಾಗಲೇ ಮೈಸೂರು ವಿಮಾನ ನಿಲ್ದಾಣಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ಹೆಸರಿಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರು ಬದಲಿಸಿ ‘ಟಿಪ್ಪು’ ಹೆಸರಿಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ‘ಟಿಪ್ಪು’ ಹೆಸರು ಇಡುವ ಬಗ್ಗೆ ಕಾಂಗ್ರೆಸ್ ಸರ್ಕಾರ ಚರ್ಚೆ ಶುರು ಮಾಡಿದೆ. ಇಂಥದ್ದೊಂದು ಚರ್ಚೆ ಮತ್ತು ಪ್ರಸ್ತಾವನೆ ಅಸಂಬದ್ಧ. ಏಕೆಂದರೆ ಈಗಾಗಲೇ ಕಾನೂನಾತ್ಮಕವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ಹೆಸರಿಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನಾನು 27-05-2022 ರಂದು ಖುದ್ದಾಗಿ ಪತ್ರ ಬರೆದು ಹಾಗೂ ವೈಯಕ್ತಿಕವಾಗಿ ಭೇಟಿಯಾಗಿ ‘ಮೈಸೂರು ವಿಮಾನ ನಿಲ್ದಾಣ’ ಎಂದು ಪ್ರಸ್ತುತ ಇರುವ ಹೆಸರನ್ನು ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ’ ಎಂದು ಮರು ನಾಮಕರಣ ಮಾಡುಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ವಿನಂತಿಸಿಕೊಂಡಿದ್ದೆ. ಜತೆಗೆ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೂ ಹಣ ಬಿಡುಗಡೆ ಮಾಡುವಂತೆ ಕೋರಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಬಸವರಾಜು ಬೊಮ್ಮಾಯಿ ಅವರು ರನ್ ವೇ ವಿಸ್ತರಣೆಗೆ 39 ಕೋಟಿ ರೂ. ಬಿಡುಗಡೆ ಮಾಡಿದ್ದರು. ಜತೆಗೆ ಶ್ರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಮರು ನಾಮಕರಣಕ್ಕೆ ಕ್ಯಾಬಿನೆಟ್ ಒಪ್ಪಿಗೆಯನ್ನೂ ಕೊಟ್ಟರು. ಇದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು 18-08-2022 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸ್ಸನ್ನೂ ಮಾಡಿದ್ದಾರೆ. ಅಲ್ಲಿಗೆ ಮರು ನಾಮಕರಣದ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದಾಯಿತು. ಇಂತಹ ಸಂದರ್ಭದಲ್ಲಿ ಮತ್ತೆ ರಾಜ್ಯ ಕಾಂಗ್ರೆಸ್ ಸರ್ಕಾರ ಟಿಪ್ಪು ಹೆಸರು ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net