ಮುಡಾ ಬಡಾವಣೆ ಹಸ್ತಾಂತರ ಪ್ರಕ್ರಿಯೆಗೆ ಮುಕ್ತಿ ದೊರೆತಿಲ್ಲ

images
Published on

ಆರ್.ಕೃಷ್ಣ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಹೊರ ಬಂದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಬಡಾವಣೆ ಹಸ್ತಾಂತರ ಕುರಿತು ನಡೆಯುತ್ತಿರುವ ಪ್ರಕ್ರಿಯೆಗೆ ಮುಕ್ತಿ ದೊರೆತಿಲ್ಲ.

ಮುಡಾ ಬಡಾವಣೆ ಅಭಿವೃದ್ಧಿ ಮಾಡಬಹುದೇ ವಿನಾ ನಿರ್ವಹಣೆ, ಖಾತೆ, ಕಂದಾಯ ಮಾಡಲು ಅಧಿಕಾರ ಇಲ್ಲ. ಹಾಗಾಗಿ, ಸ್ಥಳೀಯ ಸಂಸ್ಥೆಗಳಿಗೆ ಬಡಾವಣೆಗಳನ್ನು ಹಸ್ತಾಂತರಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿತ್ತು. ಇದರಂತೆ ಮುಡಾ ಅಭಿವೃದ್ಧಿಪಡಿಸಿದ ಹಾಗೂ ಖಾಸಗಿಯವರು ಅನುಮೋದನೆ ಪಡೆದು ನಿರ್ಮಿಸಿದ ಬಡಾವಣೆಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿಗೆ ಬೇಕಾದ ಹಣವಿಲ್ಲ ಎನ್ನುವ ಕಾರಣ ನೀಡಿ, ಮೈಸೂರು ನಗರ ಸುತ್ತ ಮುತ್ತಲಿರುವ ಬಡಾವಣೆ ನಿವಾಸಿಗಳು ತಮ್ಮ ಬಡಾವಣೆಗಳನ್ನು ನಗರಪಾಲಿಕೆ ಇಲ್ಲವೇ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಉಳಿಸಬೇಕು ಎಂದು ದುಂಬಾಲು ಬಿದ್ದಿದ್ದಾರೆ. ವಿಜಯನಗರ ನಾಲ್ಕನೇ ಹಂತದ ನಿವಾಸಿಗಳು ಹೂಟಗಳ್ಳಿ ನಗರಸಭೆಗೆ ಬಡಾವಣೆ ಹಸ್ತಾಂತರ ಮಾಡುವ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದ ಮೊರೆ ಹೋದ ಬೆನ್ನಲ್ಲೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳು ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ನಮ್ಮ ಬಡಾವಣೆಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಡಿ, ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿ ಎಂದು ಪಟ್ಟು ಹಿಡಿದಿದ್ದಾರೆ.

ನ್ಯಾಯಾಲಯ ಕೂಡ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವುದರಿಂದ ಮುಡಾದ ಬಡಾವಣೆ ಹಸ್ತಾಂತರ ಪ್ರಕ್ರಿಯೆಗೆ ಹಿನ್ನಡೆಯಾಗಿದ್ದು, ಮುಡಾ ವ್ಯಾಪ್ತಿಯ 22 ಬಡಾವಣೆಗಳ ನಿವಾಸಿಗಳು ಅತಂತ್ರರಾಗಿದ್ದಾರೆ. ಶ್ರೀರಾಂಪುರ ವ್ಯಾಪ್ತಿಯಲ್ಲಿ ಮುಡಾ ಅನುಮೋದಿತ ಈ ಬಡಾವಣೆಗಳು ಮೈಸೂರು ನಗರ ಪಾಲಿಕೆಯ 65ನೇ ವಾರ್ಡಿಗೆ ಸೇರಿದ್ದು, 800 ಮನೆಗಳಿದ್ದು, 200ಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಮುಡಾ ವ್ಯಾಪ್ತಿಯಲ್ಲಿನ ಕಂದಾಯ ಬಡಾವಣೆ 1,2,3, ಪ್ರೀತಿ ಲೇಔಟ್, ಮುನಿ ನಾರಾಯಣ ಲೇಔಟ್, ಹಂಸ ಬಡಾವಣೆ, ಎಂಡಿಸಿಸಿ ಬಡಾವಣೆ, ಶಕ್ತಿ ಬಡಾವಣೆ, ಎಂಸಿಡಿ ಬಡಾವಣೆ, ಭವ್ಯ ಭಾರತ ಬಡಾವಣೆ ಸೇರಿದಂತೆ 22 ಬಡಾವಣೆಗಳನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಪಟ್ಟಿ ಮಾಡಲಾಗಿದೆ.

ಈ ಬಡಾವಣೆ ನಿವಾಸಿಗಳು 2008 ರಿಂದಲೂ ನಗರಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡುತ್ತಾ ಬಂದಿದ್ದು, ಪಾಲಿಕೆ ಮತದಾರರಾಗಿದ್ದಾರೆ. ಹೀಗಾಗಿ, ಮತದಾನ ಒಂದು ಕಡೆ, ಬಡಾವಣೆಗಳ ನಿರ್ವಹಣೆ ಮತ್ತೊಂದು ಕಡೆ ಬೇಡ. ನಾವು ಆಯ್ಕೆ ಮಾಡಿ ಗೆಲ್ಲಿಸಿದ ನಗರಪಾಲಿಕೆ ಸದಸ್ಯರೇ ಬಡಾವಣೆಗಳ ಮೂಲಸೌಲಭ್ಯವನ್ನು ನೀಡಲಿ ಎನ್ನುವ ವಾದವನ್ನು ಬಡಾವಣೆ ನಿವಾಸಿಗಳು ಮುಂದಿಡುತ್ತಿದ್ದಾರೆ.

ಅಲ್ಲದೇ, ಸರ್ಕಾರದ ಆದೇಶ ಪ್ರಕಾರ ನಗರದ ರಿಂಗ್ ರಸ್ತೆ ಒಳಗೆ ಇರುವ ಬಡಾವಣೆಗಳು ನಗರಪಾಲಿಕೆ ವ್ಯಾಪ್ತಿಗೆ ಸೇರಬೇಕು ಎನ್ನಲಾಗಿದೆ. ಹಾಗಾಗಿ, ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅಗತ್ಯ ಮೂಲಸೌಲಭ್ಯವನ್ನು ಪಾಲಿಕೆಯಿಂದಲೇ ಪಡೆಯಬೇಕೆಂಬ ಉದ್ದೇಶದಿಂದ ಸಂಘಟಿತರಾದ ಬಡಾವಣೆಗಳ ನಿವಾಸಿಗಳು ‘ಶ್ರೀರಾಂಪುರ ನಾಗರಿಕ ಹಿತರಕ್ಷಣಾ ಸಮಿತಿ’ ಹೆಸರಿನಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಪಾಲಿಕೆಯ ಮತದಾರರಾಗಿರುವ ಬಡಾವಣೆಗಳ ನಿವಾಸಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ನ್ಯಾಯಾಲಯದಿಂದ ನಿರ್ದೇಶನ ಕೊಡಿಸಲು ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣವು ಸಹ ವಿಚಾರಣೆ ಹಂತದಲ್ಲಿದೆ.

ಈ ಮಧ್ಯೆ ಮುಡಾ ತಮ್ಮ ವ್ಯಾಪ್ತಿಯಲ್ಲಿರುವ ಈ 22 ಬಡಾವಣೆಗಳನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮಾಹಿತಿಯನ್ನು ಸಮಿತಿಯವರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಬಡಾವಣೆ ಹಸ್ತಾಂತರ ನಡೆಸದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಖಾತೆ, ಕಂದಾಯ ಇಲ್ಲದೆ ತೊಂದರೆ

ಹಸ್ತಾಂತರ ಪ್ರಕ್ರಿಯೆ ಗೊಂದಲದಿಂದಾಗಿ ನ್ಯಾಯಾಲಯದ ಮೊರೆ ಹೋಗಿರುವ ಬಡಾವಣೆಗಳ ನಿವೇಶನದಾರರು ಈಗ ಖಾತೆ, ಕಂದಾಯ ಮಾಡಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ, ನಿವೇಶನ ಮಾರಲು, ಕೊಳ್ಳಲು ಅಥವಾ ಮನೆ ನಿರ್ಮಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ.

ನ್ಯಾಯಾಲಯದಿಂದ ತಡೆ

ಕೆಲ ಬಡಾವಣೆಯವರು ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ನ್ಯಾಯಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಎ.ಎನ್. ರಘುನಂದನ್

ಆಯುಕ್ತ, ಮುಡಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net