

ಶಿರಸಿ: ಸರ್ವರ್ ಸಮಸ್ಯೆ ಹಾಗೂ ಪಡಿತರದಾರರ ನಿರ್ಲಕ್ಷ್ಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇ- ಕೆವೈಸಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ. ಇದರಿಂದ ನ್ಯಾಯಬೆಲೆ ಅಂಗಡಿಕಾರರು ಸಮಸ್ಯೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 3,92,044 ಪಡಿತರ ಕಾರ್ಡ್ದಾರರಿದ್ದು, ಈವರೆಗೆ 2,03,413 ಕಾರ್ಡ್ದಾರರು ಇ- ಕೆವೈಸಿ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಉಳಿದಂತೆ 1,88,631 ಕಾರ್ಡ್ದಾರರು ಇದರಲ್ಲಿ ಪಾಲ್ಗೊಳ್ಳಬೇಕಿದೆ. ಜಿಲ್ಲೆಯು ಬಹುತೇಕ ಗುಡ್ಡಗಾಡು ಪ್ರದೇಶವಾಗಿದ್ದು, 500ಕ್ಕೂ ಹೆಚ್ಚಿನ ಗ್ರಾಮಗಳಿಗೆ ನೆಟ್ವರ್ಕ್ ಸಮಸ್ಯೆಯಿದೆ. ಹೀಗಾಗಿ ಇಂಥ ಪ್ರದೇಶಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಇನ್ನೂ ನಡೆದಿಲ್ಲ.
ಪಡಿತರದಾರರ ನಿರಾಸಕ್ತಿ: ಇ-ಕೆವೈಸಿ ಪೂರ್ಣಗೊಳಿಸಲು ಎಲ್ಲ ಪಡಿತರದಾರರು, ಪಡಿತರ ಚೀಟಿಯಲ್ಲಿರುವ ಹೆಸರಿನ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಡಲೇ ಬೇಕಾಗುತ್ತದೆ. ಆದರೆ, ಬಹುತೇಕ ಕಡೆ ಕಾರ್ಡ್ದಾರರೇ ನ್ಯಾಯಬೆಲೆ ಅಂಗಡಿಗೆ ಹೋಗಿ ಇ- ಕೆವೈಸಿಯಲ್ಲಿ ಭಾಗಿಯಾಗಲು ನಿರಾಸಕ್ತಿ ತೋರುತ್ತಿದ್ದಾರೆ. ಜತೆ, ನೆಟ್ವರ್ಕ್ ಕಾರಣಕ್ಕೆ ಉಂಟಾಗುತ್ತಿರುವ ಸರ್ವರ್ ಸಮಸ್ಯೆ ಕೂಡ ಸಾಕಷ್ಟು ವಿಳಂಬಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಸಂರ್ಪಸಿದರೂ ಹಲವು ತಿಂಗಳುಗಳಿಂದ ಸಮಸ್ಯೆ ಬಗೆಹರಿದಿಲ್ಲ ಎಂಬುದು ಅಂಗಡಿಕಾರರ ಮಾತಾಗಿದೆ.
ಅಂಗಡಿದಾರರಿಗೆ ನೋಟಿಸ್: ಜಿಲ್ಲೆಯಲ್ಲಿ 400ಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 286 ಅಂಗಡಿಕಾರರು ಈ ಸರ್ವರ್ ಹಾಗೂ ಇತರ ಸಮಸ್ಯೆಯಿಂದಾಗಿ ಈವರೆಗೆ ಇ-ಕೆವೈಸಿ ಪ್ರಾರಂಭಿಸಿಲ್ಲ. ಹೀಗಾಗಿ ಆಹಾರ ಇಲಾಖೆಯ ಆಯುಕ್ತರು ನ್ಯಾಯಬೆಲೆ ಅಂಗಡಿಗಳು ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಕಾರಣಕ್ಕೆ ನೊಟೀಸ್ ನೀಡಿದ್ದು, ನಿಮ್ಮ ಮೇಲೆ ಕ್ರಮ ಕೈಗೊಳ್ಳಬಾರದೇಕೆ? ಎಂದು ಪ್ರಶ್ನಿಸಿದ್ದಾರೆ. ಜತೆ, ಪ್ರತಿ ತಿಂಗಳ 1ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಬೇಕೆಂದು ಆದೇಶಿಸಿದ್ದಾರೆ. ಇದು ಅಂಗಡಿಕಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಇ- ಕೆವೈಸಿ ಸಂಬಂಧ ಶೇಕಡಾ 53ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಸಪ್ಟೆಂಬರ್ವರೆಗೂ ಈ ಕಾರ್ಯ ಪ್ರತಿ ತಿಂಗಳ 1ನೇ ತಾರೀಕಿನಿಂದ 10ನೇ ತಾರೀಕಿನವರೆಗೆ ನಡೆಯಲಿದೆ. ಸಾರ್ವಜನಿಕರು ಕಡ್ಡಾಯವಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.| ಮಂಜುನಾಥ ರೇವಣಕರ, ಆಹಾರ ಇಲಾಖೆ ಉಪನಿರ್ದೇಶಕಪ್ರತಿ ಕಾರ್ಡ್ದಾರರು ಇ-ಕೆವೈಸಿ ಪ್ರಕ್ರಿಯೆ ಮಾಡಬೇಕೆಂದು 2018ರಲ್ಲೇ ಆದೇಶವಾಗಿದೆ. ಆದರೆ, ಕೋವಿಡ್ ಕಾರಣದಿಂದ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ, ಈಗ ಎರಡು ತಿಂಗಳಿನಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಅಲ್ಲದೆ, ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ಆ.2ರಂದು ಆಯುಕ್ತರು ನ್ಯಾಯಬೆಲೆ ಅಂಗಡಿಗೆ ಇನ್ನೂ ಇ-ಕೆವೈಸಿ ಪೂರ್ಣಗೊಳಿಸಿಲ್ಲದ್ದಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಪಡಿತರದಾರರೇ ನ್ಯಾಯಬೆಲೆ ಅಂಗಡಿಗೆ ಬರದೇ ಇದ್ದಲ್ಲಿ ಅಥವಾ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದರೆ ಅಂಗಡಿಕಾರರು ಹೇಗೆ ಜವಾಬ್ದಾರರಾಗುತ್ತಾರೆ?| ಗೋಪಾಲಕೃಷ್ಣ ವೈದ್ಯ, ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ