

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಶಿಕ್ಷಕರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ನೇಮಕಾತಿಗೆ ಸಂಬಂಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದನ್ನು ಬಗೆಹರಿಸುವ ಮೂಲಕ ನೇಮಕಾತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಮುಖವಾಗಿ ಕಲ್ಯಾಣ ಕರ್ನಾಟಕದಲ್ಲಿನ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಸ್ಥಳೀಯ ವೃಂದದ ಹುದ್ದೆಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು, ಈ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ. ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ಬದಲಾಗಿ ಅಕ್ಷರ ಮಿತ್ರ ಯೋಜನೆಯಡಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಲಾಗುವ ಅನುದಾನವನ್ನು ಅದೇ ವರ್ಷದಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಬಜೆಟ್ ಪೂರ್ವ ಕ್ರಿಯಾ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಹಿಂದೆ ಬಜೆಟ್ ನಂತರ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಪೂರ್ಣಗೊಳ್ಳುವುದರಲ್ಲಿ ಡಿಸೆಂಬರ್ ಕಳೆದು ಹೋಗಿರುತ್ತಿತ್ತು. ಕಾರಣ ಮುಂಚಿತವಾಗಿ ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ.
ಕೆಕೆಆರ್‌ಡಿಬಿಯಿಂದ ಎಲ್ಲ ಜಿಲ್ಲೆಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಸಿಡಿಆರ್ ಅಂಕಿ ಅಂಶಗಳ ಆಧಾರದಲ್ಲಿ ಅನುದಾನ ಹಂಚಿಕೆಗೆ ವ್ಯವಸ್ಥೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಮುಖಂಡರಾದ ಮಹ್ಮದ್ ಶಾಲಂ, ಕೆ.ಶಾಂತಪ್ಪ, ಜಿ.ಶಿವಮೂರ್ತಿ ಉಪಸ್ಥಿತರಿದ್ದರು.