ನಾಲ್ಕೇರಿಯಲ್ಲಿ ಸಮಸ್ಯೆಗಳದ್ದೇ ಕಿರಿಕಿರಿ

22 gkp 05
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ


ನಾಲ್ಕೇರಿ ಗ್ರಾಮದಲ್ಲಿ ಕಿತ್ತು ಹೋಗಿರುವ ರಸ್ತೆಗಳು ಮೂಲ ಸಮಸ್ಯೆಯಾಗಿ ಕಾಡುತ್ತಿದೆ. ೧೫ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸ್ಥಳೀಯರು ಇರುವ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಬೇಕಿದೆ.


ಪೊನ್ನಂಪೇಟೆ ತಾಲೂಕಿಗೆ ಒಳಪಡುವ ನಾಲ್ಕೇರಿ ಗ್ರಾಮ ೧೩೦೦ ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸುತ್ತಲೂ ಹಸಿರಿನಿಂದ ಕೂಡಿರುವ ಗ್ರಾಮಕ್ಕೆ ಬೆಸೆಯುವ ರಸ್ತೆಗಳ ಕಲ್ಲು, ಡಾಂಬರು ಕಿತ್ತು ಬಂದಿವೆ. ಮಳೆಗಾಲದಲ್ಲಿ ಪ್ರವಾಹ ನಿಂತ ಮೇಲೆ ವಿದ್ಯುತ್ ಬೆಳಕು ಕಾಣುತ್ತದೆ. ಕುಡಿಯುವ ನೀರು ಯೋಜನೆಗೆ ಉದ್ಘಾಟನೆ ಭಾಗ್ಯ ಬಂದಿಲ್ಲ. ಟ್ಯಾಂಕ್, ಬೋರ್‌ವೆಲ್, ವಿದ್ಯುತ್ ವ್ಯವಸ್ಥೆ ಅನುಷ್ಠಾನಗೊಂಡಿದ್ದರೂ, ನೀರು ಪಡೆಯಲು ಗ್ರಾಮಸ್ಥರಿಗೆ ಆಗುತ್ತಿಲ್ಲ. ಬೆಳೆ ನಷ್ಟ ಹೆಚ್ಚಾಗಿ ಅನುಭವಿಸುತ್ತಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಹೀಗೆ ನಾಲ್ಕೇರಿ ಗ್ರಾಮ ಸಮಸ್ಯೆಗಳನ್ನು ಸಾರಿ ಸಾರಿ ಹೇಳುತ್ತಿದ್ದರೂ ಸ್ಪಂದನೆ ದೊರೆಯುತ್ತಿಲ್ಲ.


ರಸ್ತೆ ಸಂಚಾರ ಮೂಲ ಸಮಸ್ಯೆ; ನಿತ್ಯ ೩೦೦ ಕ್ಕೂ ಹೆಚ್ಚು ವಾಹನಗಳು ಓಡಾಡುವ ಗ್ರಾಮದಲ್ಲಿ ರಸ್ತೆ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಕೃಷಿಕ ವರ್ಗಕ್ಕೆ ರಸ್ತೆಯೇ ಜೀವಾಳ. ಕೃಷಿ ಪರಿಕರ, ಬೆಳೆ ಸಾಗಿಸಲು ರಸ್ತೆಬೇಕು. ಇರುವ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಸರ್ಕಾರಕ್ಕೆ ಹಿಡಶಾಪ ಹಾಕುತ್ತಿದ್ದಾರೆ. ಶ್ರೀಮಂಗಲಕ್ಕೆ ಬೆಸೆಯುವ ರಸ್ತೆ ಪಿಡಬ್ಲ್ಯೂಡಿ ಇಲಾಕೆಗೆ ಸೇರುತ್ತದೆ. ಉಳಿದ ೨ ರಸ್ತೆ ಜಿಲ್ಲಾ ಪಂಚಾಯಿತಿಗೆ ಸೇರುತ್ತದೆ. ಈ ಮೂರು ರಸ್ತೆಗಳು ಗ್ರಾಮಸ್ತರ ನೋವು ಹೆಚ್ಚಿಸುತ್ತಿದೆ.


ರಸ್ತೆ ೧: ನಾಲ್ಕೇರಿ-ಶ್ರೀಮಂಗಲ ಗ್ರಾಮ ಬೆಸೆಯುವ ಪ್ರಮುಖ ೩ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದು ಇಲ್ಲಿನ ಮೂಲ ಸಮಸ್ಯೆಯಾಗಿದೆ. ಗ್ರಾಮದಿಂದ ಶ್ರೀಮಂಗಲಕ್ಕೆ ಬೆಸೆಯುವ ೮ ಕಿ. ಮೀ ರಸ್ತೆ ತೀರಾ ಕಿತ್ತು ಬಂದಿದೆ. ೧೫ ವರ್ಷಗಳಿಂದ ಡಾಂಬರು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ರಸ್ತೆ ಕಾನೂರು ಮೂಲಕ ಶ್ರೀಮಂಗಲ, ಕಾನೂರು, ಕೋತೂರು, ನಾಣಚ್ಚಿ, ಕುಟ್ಟ ಭಾಗದ ಜನರಿಗೆ ಉಪಯುಕ್ತ. ಇದೇ ಮಾರ್ಗವಾಗಿ ಇರ್ಪು, ಮೃತ್ಯುಂಜಯ ದೇವಸ್ಥಾನ, ನಾಗರಹೊಳೆಗೆ ತೆರಳುವ ಪ್ರವಾಸಿಗರಿಗೂ ಪ್ರಯೋಜನವಾಗಲಿದೆ. ಆದರೆ, ಕಿತ್ತು ಹೋಗಿರುವ ರಸ್ತೆಯಿಂದ ನಿತ್ಯ ತೊಂದರೆ ಎದುರಾಗಿದೆ.


ರಸ್ತೆ ೨; ಪಲ್ಲೇರಿ-ನಾಲ್ಕೇರಿಗೆ ಸಂಪರ್ಕಿಸುವ ರಸ್ತೆ ೫ ಕಿ. ಮೀ. ದೂರ ಇದೆ. ಕುಟ್ಟ- ಬಾಡಗ ಗ್ರಾಮದ ಜನರಿಗೆ ಕೂಡ ಈ ರಸ್ತೆ ಪ್ರಯೋಜನವಾಗುತ್ತಿದೆ. ನಿರ್ವಹಣೆ ಇಲ್ಲದೆ ೧೦ ವರ್ಷ ಕಳೆದಿದೆ. ಸ್ಥಳೀಯ ನಾಯಕರು ಕೂಡ ಈ ರಸ್ತೆ ಅಭಿವೃದ್ದಿಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆದಿಲ್ಲ.


ರಸ್ತೆ ೩; ಹರಿಹರ-ನಾಲ್ಕೇರಿ ರಸ್ತೆಗೆ ಗ್ರಾಮ ಸಡಕ್ ಯೋಜನೆಯಲ್ಲಿ ಹಣ ಮಂಜೂರು ಆಗಿದ್ದರೂ ಕಾಮಗಾರಿ ಅನುಷ್ಠಾನ ಇನ್ನೂ ಆಗಿಲ್ಲ. ಓಡಾಡಲು ಆಗದ ಸ್ಥಿತಿಯಲ್ಲಿದೆ. ಗುತ್ತಿಗೆದಾರರನ್ನು ಪ್ರಶ್ನೆ ಮಾಡುವ ಜನಪ್ರತಿನಿಧಿಗಳು ಮುತುವರ್ಜಿ ತೋರಿಸುತ್ತಿಲ್ಲ. ಅಧಿಕಾರಿಗಳು ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಗ್ರಾಮಸ್ಥರನ್ನು ಸಂಕಷ್ಠಕ್ಕೆ ತಳ್ಳಿದಂತಾಗಿದೆ ಎಂದು ಸ್ಥಳಿಯರು ನೋವು ಹಂಚಿಕೊಂಡಿದ್ದಾರೆ.


ಸೇತುವೆ ಕುಸಿಯುವ ಆತಂಕ; ಶ್ರೀಮಂಗಲದಿಂದ ನಾಲ್ಕೇರಿಗೆ ಬೆಸೆಯುವ ಲಕ್ಷ್ಮಣತೀರ್ಥ ಸೇತುವೆಗೆ ಹೊಂದಿಕೊಂಡಂತಿರುವ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಇಕ್ಕೆಲಗಳು ಕುಸಿಯುವ ಆತಂಕ ಹೆಚ್ಚಿದೆ. ರಸ್ತೆ ಕುಸಿದರೆ ಸೇತುವೆ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚು. ಈ ಹಿಂದೆ ೧೯೬೨ ರಲ್ಲಿ ಇದೇ ರೀತಿ ಕೊಚ್ಚಿ ಹೋದ ಘಟನೆ ಕೂಡ ನಡೆದಿತ್ತು. ಹೊಳೆಯಲ್ಲಿ ಈಗಲೂ ಕೂಡ ಸೇತುವೆಯ ಪಳೆಯುಳಿಕೆ ಹೊಳೆಯಲ್ಲಿದೆ. ಮತ್ತೆ ಇಂತಹ ಘಟನೆ ನಡೆಯದ ಹಾಗೆ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ.

ಉದ್ಘಾಟನೆಗೆ ಲೆಕ್ಕಾಚಾರ
ಗ್ರಾಮಕ್ಕೆ ನೀರು ಸರಬರಾಜು ಮಾಡಲು ೨೦೧೯ ರಲ್ಲಿ ೧೪.೩೪ ಲಕ್ಷ ರೂ. ಅನುದಾನದಲ್ಲಿ ೫೦ ಸಾವಿರ ಸಾಮರ್ಥ್ಯದ ಒವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ನೀರಿಗಾಗಿ ಕೊಳವೆ ಬಾವಿ ತೋಡಲಾಗಿದ್ದು, ವಿದ್ಯುತ್ ಟ್ರಾನ್ಸ್‌ಫಾರಂ ಕೂಡ ಸ್ಥಾಪಿಸಲಾಗಿದೆ. ಸರಬರಾಜು ಮಾಡಲು ಕೇವಲ ವಿದ್ಯುತ್ ತಂತಿ ಜೋಡಣೆ, ಉದ್ಘಾಟನೆ ಮಾತ್ರ ಉಳಿದುಕೊಂಡಿದೆ. ಸುಮಾರು ೨೦ ಲಕ್ಷ ಅನುದಾನದ ಬಳಕೆಯಾಗಿದ್ದು, ಜನರಿಗೆ ದೊರೆಯುವಂತೆ ಮಾಡಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಪೈಪ್‌ಲೈನ್ ಮೂಲಕ ಸುಮಾರು ೧೦೦ ಕುಟುಂಬಗಲಿಗೆ ನೀರು ಒದಗಿಸಲು ಅವಕಾಶವಿದ್ದರೂ ಸದ್ಬಳಕೆಗೆ ಮುಂದಾಗಿಲ್ಲ. ಇದರೊಂದಿಗೆ ಗಿರಿಜನರು ವಾಸಿಸುತ್ತಿರುವ ಬಣ್ಣಮೊಟ್ಟೆ ಹಾಡಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ತೆರೆದ ಬಾವಿ ಇದ್ದರೂ ಕೂಡ ಸಮರ್ಪಕ ಜಲಮೂಲದ ಕೊರತೆ ಎದುರಿಸುತ್ತಿದೆ. ಪ್ರತ್ಯೇಕ ಕೊಳವೆ ಬಾವಿ ಕೊರೆದು ನೀರು ಸರಬರಾಜು ಮಾಡಬೇಕೆಂಬ ಒತ್ತಾಯ ಸ್ಥಳಿಯರಲ್ಲಿದೆ. ಬೇಸಿಗೆಯಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.

ಪಶು ಆಸ್ಪತ್ರೆ
೧೫ ವರ್ಷಗಳ ಹಿಂದೆ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಮೂಲಕ ನಿರ್ಮಿಸಿರುವ ಕೇಂದ್ರ ಮುಚ್ಚಲಾಗಿದೆ. ಗ್ರಾಮದಲ್ಲಿ ೧೦೦ ಕ್ಕೂ ಹೆಚ್ಚು ಜಾನುವಾರುಗಳಿದ್ದರೂ ಆಸ್ಪತ್ರೆ ಭಾಗ್ಯ ದೊರೆಯುತ್ತಿಲ್ಲ. ಇದರಿಂದಾಗಿ ಶ್ರೀಮಂಗಲ ಕೇಂದ್ರವನ್ನು ಅವಲಂಭಿಸಲಾಗುತ್ತಿದೆ. ಸಿಬ್ಬಂದಿ ನೇಮಿಸಿದ್ದರೂ ಕೂಡ ಸ್ಥಳೀಯರಿಗೆ ಪ್ರಯೋಜನಕ್ಕೆ ಬರುತ್ತದೆ.

ರಸ್ತೆ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ನೀಡಲಿ
ಲಕ್ಷ್ಮಣತೀರ್ಥ ನದಿ ಪ್ರವಾಹ ಮಳೆಗಾಲದಲ್ಲಿ ಸ್ಥಳಿಯರಿಗೆ ಹೆಚ್ಚು ಸಮಸ್ಯೆ ತಂದೊಡ್ಡುತ್ತಿದೆ. ವೋಲ್ಟೇಜ್ ಸಮಸ್ಯೆ ಹೆಚ್ಚು ಕಾಡುತ್ತಿದೆ. ಶ್ರೀಮಂಗಲದಿಂದ ಹೊಳೆ ಬದಿ, ಗದ್ದೆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರವಾಹ ಸಂದರ್ಭ ತಿಂಗಳು ಸಮಯ ವಿದ್ಯುತ್ ಗ್ರಾಮಕ್ಕೆ ಲಭ್ಯವಾಗುವುದಿಲ್ಲ. ಪ್ರವಾಹದಲ್ಲಿ ಸೆಸ್ಕ್ ಸಿಬ್ಬಂದಿ ಸೇವೆ ನೀಡಲು ಅವಕಾಶ ದೊರೆಯುತ್ತಿಲ್ಲ. ಇದರಿಂದಾಗಿ ಶ್ರೀಮಂಗಲ ಮೂಲಕ ರಸ್ತೆಯ ಬದಿಯಲ್ಲಿ ವಿದ್ಯುತ್ ಮಾರ್ಗ ನೀಡಬೇಕಿದೆ. ಈ ಮಾರ್ಗದ ಮೂಲಕ ಕೋತೂರು, ಕುಟ್ಟ ಭಾಗಕ್ಕೂ ವಿದ್ಯುತ್ ಸೌಲಭ್ಯ ಕಲ್ಪಿಸಬಹುದು. ತಡೆರಹಿತ ಮಾರ್ಗದ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ. ಸೆಸ್ಕ್ ಇತ್ತ ಗಮನ ಹರಿಸಬೇಕಿದೆ.

ಬೆಳೆಗಿಲ್ಲ ಪರಿಹಾರ
ಕಾಫಿ, ಭತ್ತ, ಕರಿಮೆಣಸು, ಅಡಕೆ, ಬಾಳೆ ಈ ಗ್ರಾಮದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದು ಕೃಷಿ ಚಟುವಟಿಕೆಗೆ ಗಂಡಾಂತರವಾಗುತ್ತಿದೆ. ಕಾಫಿ, ಕರಿಮೆಣಸು ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿದೆ. ನೆಲಕಚ್ಚುವ ಬೆಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಳೆ ರೋಗ ಉಲ್ಭಣಗೊಳುತ್ತಿದೆ. ಇಲ್ಲಿನ ಸರಾಸರಿ ೬೦-೬೫ ಇಂಚು, ಇತ್ತೀಚಿನ ವರ್ಷಗಳಲ್ಲಿ ೧೦೦ ಇಂಚಿಗೂ ಅಧಿಕ ಮಳೆಯಾಗುತ್ತಿರುವುದು ಕೃಷಿಕರ ಮೊಗದಲ್ಲಿ ನಿರಾಸೆ ಕಾಣುವಂತಾಗಿದೆ. ಪರಿಹಾರದ ರೂಪದಲ್ಲಿ ರೈತರನ್ನು ರಕ್ಷಿಸಬೇಕಿದೆ.

ಸ್ಥಳೀಯರ ಬೇಜಬ್ದಾರಿ
ಕಸ ವಿಲೇವಾರಿಗೆ ಸ್ವಚ್ಛ ವಾಹನ, ಸ್ವಚ್ಚ ಘಟಕ ಇದ್ದರೂ ಕೂಡ ಕೆಲವೊಂದು ಜನರು ರಸ್ತೆ ಬದಿಗೆ ಕಸ ಹಾಕುವುದು ಮುಂದುವರಿದಿದೆ. ಆಹಾರ ಪೊಟ್ಟಣ ಬಿಸಾಡುವುದರಿಂದ ನಾಯಿಗಳು ಪ್ಲಾಸ್ಟಿಕ್ ಕೂಡ ಸೇವಿಸುತ್ತಿವೆ. ಜನರು ಬದಲಾಗಬೇಕಿದೆ. ಸ್ವಚ್ಚ ಗ್ರಾಮಕ್ಕೆ ಕೈಜೋಡಿಬೇಕಿದೆ. ಒಂದೊಂದು ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿನ ಬೇಲಿ ರಸ್ತೆ ಸಂಚಾರಕ್ಕೆ ತೊಡಕ್ಕಾಗಿದೆ. ಬೇಲಿ ಕಡಿಯಲು ಆಯಾ ತೋಟದ ಮಾಲೀಕರು ಜವಬ್ದಾರಿ ತೋರಬೇಕಿದೆ.

ಗ್ರಾಮದ ಪ್ರಮುಖ ಮೂರು ರಸ್ತೆಗಳು ಬಹುತೇಕ ೧೫ ವರ್ಷಗಳಿಂದ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕೃಷಿ ಚಟುವಟಿಕೆಗೆ ರಸ್ತೆಗಳು ಮುಖ್ಯ. ಗ್ರಾಮಸ್ಥರು ಕೂಡ ಸಾಕಷ್ಟು ಬಾರಿ ರಸ್ತೆ ದುರಸ್ತಿಗೆ ಆಗ್ರಹಿಸಿದೆ. ಇಲಾಖೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಗ್ರಾಮದ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ.-ಮುಕ್ಕಾಟೀರ ಪ್ರವೀಣ್ ಭೀಮಯ್ಯ, ಮಾಜಿ ಉಪಾಧ್ಯಕ್ಷರು, ನಾಲ್ಕೇರಿ ಗ್ರಾಮ ಪಂಚಾಯಿತಿರೈತರು ಹೆಚ್ಚಿರುವ ಗ್ರಾಮದಲ್ಲಿ ಜಾನುವಾರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಪಶು ಆಸ್ಪತ್ರೆ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಕಟ್ಟಿರುವ ಕಟ್ಟಡ ಪ್ರಯೋಜನಕ್ಕೆ ಬರುತ್ತಿಲ್ಲ. ಸೂಕ್ತ ವೈದ್ಯರು ಅಥವಾ ಸಿಬ್ಬಂದಿ ನೇಮಕ ಮಾಡಬೇಕಿದೆ.-ಕಳ್ಳಂಗಡ ನಿತಿ ಪೂಣಚ್ಚ, ಗ್ರಾಮಸ್ಥನೀರಿನ ಟ್ಯಾಂಕ್ ಗ್ರಾಮಸ್ಥರ ನೀರಿನ ದಾಹ ತೀರಿಸಲು ಬಳಕೆಯಾಗಬೇಕು. ಬೇಸಿಗೆ ಕಾಲ ಬರುವ ಮುನ್ನ ಉದ್ಘಾಟಿಸಿ, ನೀರು ಸರಬರಾಜು ಮಾಡಲು ಯೋಜನೆ ರೂಪಿಸಬೇಕು. ಜನಪಯೋಗಿ ಯೋಜನೆ ಸದ್ಬಳಕೆಯಾಗಲಿ.-ಅಲ್ಲುಮಾಡ ಮುತ್ತಪ್ಪ, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net