ಅಧಿಕಾರಿಗಳ ನಿರ್ಲಕ್ಷೃದಿಂದಲೇ ಸಮಸ್ಯೆಗಳು ಜೀವಂತ

nrp sp
ಎನ್.ಆರ್.ಪುರದಲ್ಲಿ ಎಸ್ಪಿ ಡಾ. ವಿಕ್ರಮ್ ಅಮಟೆ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ದಲಿತರ ಕುಂದು ಕೊರತೆ ಸಭೆ ನಡೆಯಿತು. ತನುಜಾ ಟಿ. ಸವದತ್ತಿ, ಗುರುದತ್ ಕಾಮತ್, ಬಿ.ಎಸ್.ನಿರಂಜನ್‌ಗೌಡ, ರವಿ ಇದ್ದರು.
Published on

ಎನ್.ಆರ್.ಪುರ: ಅನೇಕ ಸಭೆಗಳಲ್ಲಿ ದಲಿತರ ಸಮಸ್ಯೆ ಹೇಳಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಡಿಎಸ್‌ಎಸ್ ಮುಖಂಡ ಎಚ್.ಎಂ.ಶಿವಣ್ಣ ಆರೋಪಿಸಿದರು.

ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಸ್ಪಿ ಡಾ. ವಿಕ್ರಮ್ ಅಮಟೆ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದವರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಿ.ರಾಮು ಮಾತನಾಡಿ, ಸೂಸಲವಾನಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮಾಜದವರಿಗೆ ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. 1993ರಲ್ಲಿ ಆದಿ ಕರ್ನಾಟಕ ಜಾತಿಯನ್ನು ಪುಲಿಯನ್ ಜಾತಿ ಎಂದು ತಪ್ಪಾಗಿ ನಮೂದಿಸಿದ್ದು ಇದರಿಂದಾಗಿ 2013ರ ನಂತರ ಸರ್ಕಾರ ಇವರ ಜಾತ್ರಿ ಪ್ರಮಾಣ ಪತ್ರ ನವೀಕರಣ ಮಾಡದೆ ಕಡೆಗಣಿಸಲಾಗಿದೆ. ಜಾತಿ ಪ್ರಮಾಣ ಪತ್ರ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಅರಳಿಕೊಪ್ಪ ಗ್ರಾಮದ ಬಸವನಗದ್ದೆಯಲ್ಲಿ ಅಂಬೇಡ್ಕರ್ ಭವನಕ್ಕೆ ಒಂದು ಎಕರೆ ಜಾಗ, 50 ಲಕ್ಷ ರೂ. ಮಂಜೂರಾಗಿದೆ. ಆದರೆ ತಳಪಾಯ ಮಾತ್ರ ಆಗಿದೆ. ಉಳಿದ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಹಣ ಬಿಡುಗಡೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಶೆಟ್ಟಿಕೊಪ್ಪ ಮಹೇಶ್ ಮಾತನಾಡಿ, ಪಟ್ಟಣದ ಮೇದರ ಬೀದಿಯಲ್ಲಿ ಸ್ಮಶಾನ ಭೂಮಿಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ದಾಖಲೆ ಇದೆ. ಆದರೂ ಮಂಜೂರು ಮಾಡಿಲ್ಲ ಎಂದರು. ಬೈರಾಪುರ ಚಿತ್ರಪ್ಪ ಯರಬಾಳ್ ಮಾತನಾಡಿ, ನನ್ನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕ ದ್ವೇಷದಿಂದ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ 2.50 ಎಕರೆ ಗೇರುತೋಟ ನಾಶ ಮಾಡಿದ್ದಾರೆ. ಜತೆಗೆ ಆನೆಗಳ ಕಾಟದಿಂದ ಜಮೀನಿನ ಫಸಲು ಹಾಳಾಗುತ್ತಿದೆ. ನನ್ನ ಜಮೀನಿಗೆ ಅರಣ್ಯ ಭೂಮಿ ಎಂದು ಹಕ್ಕು ಪತ್ರ ನೀಡಿಲ್ಲ. ಆದರೆ ನನ್ನ ಪಕ್ಕದ ರೈತರ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್ ಮಾತನಾಡಿ, ಬನ್ನೂರು ಗ್ರಾಮದಲ್ಲಿ ಗಿರಿಜನರಿಗೆ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು. ವಾಲ್ಮೀಕಿ ಸಂಘದ ತಾಲೂಕು ಕಾರ್ಯದರ್ಶಿ ನಾಗರಾಜ್ ಮಾತನಾಡಿ, ವಾಲ್ಮೀಕಿ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ಕೇಳಿ 5 ವರ್ಷವಾದರೂ ನೀಡಿಲ್ಲ. ಕರ್ಕೇಶ್ವರ ಗ್ರಾಪಂನಲ್ಲಿ ದಲಿತ ಮಹಿಳೆಯ ಮನೆ ಕುಸಿದಿದೆ. ಮನೆ ಕಟ್ಟಲು ಸರ್ಕಾರ 1.20 ಲಕ್ಷ ರೂ. ನೀಡಿದೆ. ಆದರೆ ಮನೆ ಕಟ್ಟಲು ಆ ಹಣ ಸಾಕಾಗುವುದಿಲ್ಲ ಎಂದರು.
ಎಲ್ಲರ ಸಮಸ್ಯೆಗಳನ್ನು ಆಲಿಸಿದ ಎಸ್ಪಿ ಡಾ. ವಿಕ್ರಮ್ ಅಮಟೆ, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ನಡೆಸುತ್ತೇನೆ. ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಸಮಸ್ಯೆ ಇದ್ದರೂ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಮಸ್ಯೆಗಳನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ಕಳಿಸಿ ಬಗೆಹರಿಸುವಂತೆ ಮನವಿ ಮಾಡುತ್ತೇನೆ. ಚಿಕ್ಕಮಗಳೂರಿನಲ್ಲೂ ದಲಿತ ಕುಂದು ಕೊರತೆ ಸಭೆ ನಡೆಸಲಾಗಿದ್ದು ನಿಮ್ಮ ತಾಲೂಕಿನ ಮುಖಂಡರು ಸಹ ಭಾಗವಹಿಸಿದ್ದಾರೆ. ಮುಂದೆ ದಲಿತ ಕೇರಿಗಳಲ್ಲೂ ಸಭೆ ನಡೆಸುತ್ತೇನೆ ಎಂದು ಹೇಳಿದರು.
ತನುಜಾ ಟಿ. ಸವದತ್ತಿ, ಗುರುದತ್ ಕಾಮತ್, ಬಿ.ಎಸ್.ನಿರಂಜನ್‌ಗೌಡ, ರವಿ, ತಾಲೂಕು ಡಿಎಸ್‌ಎಸ್ ಮುಖಂಡ ಡಿ.ರಾಮು, ಸಂಚಾಲಕಿ ಪವಿತ್ರಾ, ಎಸ್.ಮಂಜು, ಎಚ್.ಎಂ.ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net