

ಹುನಗುಂದ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಗ್ರಾಮೀಣ ಕೂಲಿ ಕಾರ್ಮಿಕರ (ಗ್ರಾಕೂಸ್) ವಿವಿಧ ಬೇಡಿಕೆಗಳನ್ನು ಹಂತ, ಹಂತವಾಗಿ ಈಡೇರಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಪ್ರತಿಭಟನಾನಿರತ ಕಾರ್ಮಿಕರಿಗೆ ಭರವಸೆ ನೀಡಿದರು.
ಕಳೆದ ನಾಲ್ಕು ತಿಂಗಳಿಂದ ಕೂಲಿ ನೀಡಿಲ್ಲ. ಎನ್‌ಎಂಆರ್ ಜೀರೋ ಮಾಡುವುದು, ಎರಡು ವರ್ಷಗಳಿಂದ ವೈದ್ಯಕೀಯ ವೆಚ್ಚ ನೀಡದಿರುವುದು ಮುಂತಾದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಾ.ಪಂ. ಮುಂಭಾಗದಲ್ಲಿ ಧರಣಿ ನಡೆಸಿದ್ದ ಪ್ರತಿಭಟನೆಕಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಸಾವಿರಾರು ಕೋಟಿ ರೂ. ಕೆಲಸ ನೀಡಿದ್ದರೂ ಹಲವಾರು ತಾಲೂಕಿನಲ್ಲಿ ಕೆಲಸದ ಸ್ಥಳವನ್ನು ನೋಡಿದರೆ ಎಲ್ಲೂ ಕೆಲಸದ ಬಗ್ಗೆ ತೃಪ್ತಿ ತಂದಿಲ್ಲ. ಎಲ್ಲೋ ಒಂದು ಕಡೆ ಸಮಸ್ಯೆ ಇರುತ್ತದೆ. ಆದರೆ ನೀವು ಮಾಡುವ ಕೆಲಸ ಶೇ. 60 ರಿಂದ 80ರಷ್ಟಾದರೂ ಸಮರ್ಪಕವಾಗಿ ಇರಬೇಕು. ಜನರಿಗೆ ಅನುಕೂಲಕಾರಿಯಾಗಬೇಕು ಎಂದು ತಿಳಿ ಹೇಳಿದರು.
ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಗ್ರಾಕೂಸ್‌ಗೆ ಒಂದು ನ್ಯಾಯ ಮತ್ತು ನಾನ್ ಗ್ರಾಕೂಸ್‌ಗೆ ಮತ್ತೊಂದು ನ್ಯಾಯ ಎಂಬಂತೆ ವರ್ತಿಸುತ್ತಿದ್ದಾರೆ. ಗ್ರಾಕೂಸ್‌ಗಳಿಗೆ 50 ಜನರಿದ್ದರೇ ಮಾತ್ರ ಕೆಲಸ ಕೊಡುತ್ತಾರೆ. ಆದರೆ ನಾನ್ ಗ್ರಾಕೂಸ್‌ರಿಗೆ 10 ಜನರಿದ್ದರೂ ಕೆಲಸ ನೀಡುತ್ತಾರೆ. ಈ ತಾರತಮ್ಯ ಸರಿಯಲ್ಲ ಎಂದು ಪ್ರಶ್ನಿಸಿದರು.
ಮುಖಂಡರ ಪ್ರಶ್ನೆಗೆ ಉತ್ತರಿಸಿದ ಸಿಇಒ, ನಮಗೆ ಗ್ರಾಕೂಸ್, ನಾನ್ ಗ್ರಾಕೂಸ್ ಮುಖ್ಯವಲ್ಲ. ನರೇಗಾ ಯೋಜನೆ ಯಶಸ್ವಿಯಾಗುವುದು ಮುಖ್ಯ. ನಮ್ಮಲ್ಲಾಗಿರುವ ದೋಷವನ್ನು ಅಧಿಕಾರಿಗಳ ಮೂಲಕ ಸರಿಪಡಿಸಲಾಗುವುದು. ನೀವೂ ಕೂಡ ವಹಿಸಿಕೊಂಡ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ನೆರೆದಿದ್ದ ಕಾರ್ಮಿಕರು ಕಳೆದೆರಡು ವರ್ಷಗಳಿಂದ ವೈದ್ಯಕೀಯ ವೆಚ್ಚವನ್ನು ಪ್ರತಿ ಗ್ರಾ.ಪಂ. ನೀಡುತ್ತಿಲ್ಲ ಎಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಸಿಇಒ ಕೆಲಸದ ಮೇಲಿದ್ದಾಗ ಕಾರ್ಮಿಕರಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಅವರು ಚಿಕಿತ್ಸೆ ಪಡೆದಿರುವ ದಾಖಲೆ ಆಧಾರದ ಮೇಲೆ ವೈದ್ಯಕೀಯ ವೆಚ್ಚ ನೀಡಲಾಗುತ್ತದೆ ಎಂದು ತಿಳಿವಳಿಕೆ ನೀಡಿದರು.
ನಮ್ಮ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸಲು ಕಾರ್ಮಿಕರು ಗಡುವು ನೀಡಿ ಎಂಬ ಕಾರ್ಮಿಕರ ಬೇಡಿಕೆಗೆ ಅದಕ್ಕೆ ಪ್ರತಿಕ್ರಿಯಿಸಿದ ಶಶಿಧರ ಕುರೇರ, ನರೇಗಾ ಯೋಜನೆಯಲ್ಲಿ ಹಲವು ತಾಂತ್ರಿಕ ವ್ಯವಸ್ಥೆ ಇದ್ದು, ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ ನಂತರ ಕಾರ್ಮಿಕರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡರು.
ತಾ.ಪಂ. ಇಓ ಮುರಳಿಧರ ದೇಶಪಾಂಡೆ, ನರೇಗ ಯೋಜನೆ ಎಡಿಗಳಾದ ಮಹಾಂತೇಶ ಕೋಟಿ, ಪಿಎಸ್‌ಐ ಪ್ರಕಾಶ ಡಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡರಾದ ಯಮನಪ್ಪ ಹೊಸಮನಿ, ಯಮನಪ್ಪ ಮಾದರ, ಈರಪ್ಪ ಅಂಗಡಿ, ಶಾರದಾ ಪರನಗೌಡ್ರ, ಸೌಮ್ಯ ವಟವಟಿ, ರೇಣುಕಾ ತುಪ್ಪದ, ಸುವರ್ಣ ತೊಗರಿ, ಕಲ್ಲಪ್ಪ ಆನೆಹೊಸೂರ, ಸೈರಾಬಾನು ಹಿರೇಮನಿ, ಬಾನುಬೇಗಂ ಮುಲ್ಲಾ, ಮಹಾದೇವಿ ಹಡಪದ, ರೇಣುಕಾ ಕುರಿ, ನಿಂಗಮ್ಮ ಪಾಟೀಲ ಅಂಬರೀಶ ನಂದವಾಡಗಿ, ಪರಶು ಚಿಕ್ಕಆದಾಪೂರ, ರಜೀಯಾ ನಂದಿಹಾಳ ಇತರರಿದ್ದರು.