

ಜಗಳೂರು: ತಾಲೂಕಿನ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಭೋಜನಾಲಯ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 30 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಿಸಿಯೂಟ ತಯಾರಿಸಲು ಅಡುಗೆ ಕೊಠಡಿ, ಭೋಜನಾಲಯ ಕೊರತೆ ಇದೆ. ಆದ್ದರಿಂದ ಖಾಸಗಿ ಕಟ್ಟಡದಲ್ಲಿ ಅಡುಗೆ ತಯಾರಿಸಿ, ಅಂಗನವಾಡಿ ಕಟ್ಟಡದಲ್ಲಿ ಊಟ ಬಡಿಸಲಾಗುತ್ತಿತ್ತು.
ಹೀಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ಹೊಸ ಕಟ್ಟಡ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಿ, ಜಿಪಂ, ಗ್ರಾಪಂನಿಂದ ಅನುಮೋದನೆ ಪಡೆಯಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿಸಿ ಕಾಮಗಾರಿ ಕೂಡ ಪ್ರಾರಂಭಿಸಲಾಗಿತ್ತು. ಈ ಕಟ್ಟಡ ನಿರ್ಮಾಣ ಆರ್‌ಸಿಸಿ ಹಂತಕ್ಕೆ ತಲುಪಿದ್ದು, ಕಳೆದ ಆರು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಶೇ. 55 ಕಮಿಷನ್ ಆರೋಪ: ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 17 ಲಕ್ಷ ರೂ. ವೆಚ್ಚದಲ್ಲಿ ಭೋಜನಾಲಯ, ಬಿಸಿಯೂಟ ತಯಾರಿಕೆ ಕೊಠಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈಗ ಈ ಕಾಮಗಾರಿ ಆರ್‌ಸಿಸಿ ಹಂತದಲ್ಲಿ ನಡೆದಿದೆ. ಇದಕ್ಕೆ ಸರ್ಕಾರದಿಂದ ಅಂದಾಜು 10 ಲಕ್ಷ ರೂ. ಬಿಡುಗಡೆ ಆಗಿದೆ. ಆದರೆ, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನಿಗೆ ಕೇವಲ 3.50 ಲಕ್ಷ ರೂ. ಪಾವತಿಯಾಗಿದ್ದು, ಉಳಿದ 6.50 ಲಕ್ಷ ರೂ. ಅಧಿಕಾರಿಗಳು, ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಶೇ.55 ರಷ್ಟು ಪರ್ಸೆಂಟೇಜ್ ಪಡೆದಿದ್ದಾರೆ. ಇದರಿಂದ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಗ್ರಾಪಂ ಸದಸ್ಯರು, ಮುಖಂಡರು ದೂರಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ಭೋಜನಾಲಯ ಇಲ್ಲದೆ ಹಳೆ ಕಟ್ಟಡದಲ್ಲಿ ಊಟ ಬಡಿಸಲಾಗುತ್ತಿದೆ. ಗೋಡೆ ಕುಸಿದು ಸಾವು- ನೋವು ಸಂಭವಿಸಿದರೆ ಯಾರು ಹೊಣೆ. ಈಗ ನನೆಗುದಿಗೆ ಬಿದ್ದಿರುವ ಭೋಜನಾಲಯನ್ನು ಕಮಿಷನ್‌ಗಾಗಿ ನಿಲ್ಲಿಸಿರುವುದು ಎಷ್ಟು ಸರಿ. ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು.
I ಜಗದೀಶ್, ಗ್ರಾಮಸ್ಥ, ಸೋಮನಹಳ್ಳಿ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಭೋಜನಾಲಯ ನನೆಗುದಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು.
I ಕೆಂಚಪ್ಪ, ಇಒ, ತಾಪಂ, ಜಗಳೂರು.