

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯಾದ್ಯಂತ ಇರುವ ಶಾಲಾ ಮಕ್ಕಳ ದಾಖಲಾತಿಗಳು ಏಕರೀತಿಯಲ್ಲಿ ಇರಬೇಕೆಂಬ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಎಸ್ಎಟಿಎಸ್ಗೆ ಆಧಾರ್ ಲಿಂಕ್ ಪ್ರಕ್ರಿಯೆ ಆರಂಭಿಸಿದ್ದು, ಇದು ಆಯಾ ಜಿಲ್ಲೆಯಲ್ಲಿರುವ ಅನ್ಯ ಜಿಲ್ಲೆಯ ಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ಅನ್ಯ ರಾಜ್ಯ ಅಥವಾ ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಗೊಂಡು ಬಂದ ಅನೇಕ ಪಾಲಕರಿಗೆ ಇದೀಗ ತಮ್ಮ ಮಕ್ಕಳ ಶಾಲಾ ದಾಖಲಾತಿಯ ಸಮಸ್ಯೆ ಎದುರಾಗಿದೆ.
ವಿದ್ಯಾರ್ಥಿಯ ಜನ್ಮ ದಾಖಲೆಯ ಪ್ರಕಾರವೇ ಶಾಲೆಯಲ್ಲೂ ಸಹ ಅಡ್ಮಿಷನ್ ಮಾಡಲಾಗಿರುತ್ತದೆ. ಕಳೆದ 4-5 ವರ್ಷದಿಂದ ಶಾಲಾ ಮಕ್ಕಳಿಗೂ ಸಹ ಆಧಾರ್ ಕಡ್ಡಾಯ ಮಾಡಿದ್ದರಿಂದ ಇದಕ್ಕೂ ಸಹ ವಿದ್ಯಾರ್ಥಿಯ ಜನ್ಮ ದಾಖಲೆಯ ಪ್ರಕಾರವೇ ಮಾಡಲಾಗಿದೆ. ಆದರೆ, ಕೆಲ ಶಾಲೆಯ ಅಡ್ಮಿಷನ್ ಫಾರ್ಮ್ ಗಳಲ್ಲಿ ಆರಂಭದಲ್ಲಿ ವಿದ್ಯಾರ್ಥಿಯ ಹೆಸರು:- ಇಲ್ಲಿ ಫಸ್ಟ್ ನೇಮ್, ಮಿಡ್ಲ್ ನೇಮ್ ಹಾಗೂ ಸರ್ ನೇಮ್ ಎಂದು ಇರುತ್ತದೆ. ಹೀಗಾಗಿ ಸಹಜವಾಗಿಯೇ ಪಾಲಕರು ಇಲ್ಲಿ ಮೊದಲಿಗೆ ಮಗುವಿನ ಹೆಸರು, ನಂತರ ಪಾಲಕರ ಹೆಸರು ಹಾಗೂ ಕೊನೆಯಲ್ಲಿ ಸರ್ ನೇಮ್ ಭರ್ತಿ ಮಾಡಿರುತ್ತಾರೆ.
ಇಲ್ಲಿಯೂ ಸಹ ವಿದ್ಯಾರ್ಥಿಯ ಜನ್ಮ ದಾಖಲೆಯ ಪ್ರಕಾರವೇ ಭರ್ತಿ ಮಾಡಲಾಗುತ್ತದೆ. ಆದರೆ, ಇಲ್ಲಿನ ಫಾರ್ಮ್ ಗಳಲ್ಲಿ ಮೊದಲ ಸಾಲಿನಲ್ಲಿ ವಿದ್ಯಾರ್ಥಿಯ ಹೆಸರು, ನಂತರ ಪಾಲಕರ ಹೆಸರು, ತದನಂತರ ಸರ್ ನೇಮ್ ಹೀಗೆ ಪ್ರತ್ಯೇಕವಾಗಿ ತುಂಬಲು ಅವಕಾಶವಿದೆ. ಹೀಗಾಗಿ ಒಂದು ವಿದ್ಯಾರ್ಥಿಯ ಹೆಸರು ಸಂಪೂರ್ಣವಾಗಿ ಎ ಬಿ ಸಿ ಇದೆಯೆಂದರೆ ಮೊದಲಿಗೆ ಎ ಸಿ, ನಂತರ ಪಾಲಕರ ಹೆಸರಲ್ಲಿ ಬಿ ಸಿ, ತದನಂತರ ತಾಯಿಯ ಹೆಸರು ಎಕ್ಸ್ ಸಿ ಎಂದು ಭರ್ತಿ ಮಾಡಿರುತ್ತಾರೆ. ಹೀಗಾಗಿ ಆಧಾರ್ನಲ್ಲಿ ವಿದ್ಯಾರ್ಥಿಯ ಹೆಸರು ಎ ಸಿ ಎಂದು ನಮೂದಾಗಿರುತ್ತದೆ.
ಎಲ್ಕೆಜಿಗೋ ಅಥವಾ ಒಂದನೇ ತರಗತಿಗೋ ತಮ್ಮ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಸುವಾಗ ಪಾಲಕರು ಫಸ್ಟ್ ನೇಮ್, ಮಿಡ್ಲ ನೇಮ್ ಹಾಗೂ ಸರ್ ನೇಮ್ ಪ್ರಕಾರವೇ ಭರ್ತಿ ಮಾಡಿರುತ್ತಾರೆ. ಆದರೆ, ಜನ್ಮ ದಾಖಲೆ ಅಥವಾ ಆಧಾರ್ನಲ್ಲಿ ಫಸ್ಟ್ ನೇಮ್ ಮತ್ತು ಲಾಸ್ಟ್ ನೇಮ್ ಮಾತ್ರ ಇದ್ದರೆ ಅಥವಾ ವಿದ್ಯಾರ್ಥಿಯ ಹೆಸರೊಂದೇ ಇದ್ದರೆ ಈಗ ಶಿಕ್ಷಣ ಇಲಾಖೆಯ ಎಸ್ಎಟಿಎಸ್ಗೆ ಆಧಾರ್ ಲಿಂಕ್ ಮಾಡುವಾಗ ಕಂಪ್ಯೂಟರ್ ಸ್ವೀಕರಿಸುತ್ತಿಲ್ಲ. ಈ ದಾಖಲೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಬರುತ್ತಿದೆ. ಎಲ್ಲ ದಾಖಲೆ ಸರಿಯಿದ್ದರೂ ಮತ್ತೆ ಆಧಾರ್ ಅಥವಾ ಜನ್ಮದಾಖಲೆ ತಿದ್ದುಪಡಿ ಮಾಡಿಸಬೇಕಿದೆ. ಇದಕ್ಕಾಗಿ ಈ ಹಿಂದೆ ಉದ್ಯೋಗದಲ್ಲಿದ್ದ ಅನ್ಯ ರಾಜ್ಯ ಅಥವಾ ಜಿಲ್ಲೆಗೆ ಪಾಲಕರು ಮತ್ತು ಅದೇ ಜಿಲ್ಲೆಯ ಪಾಲಕರು ಅಲೆದಾಡುವಂತಾಗಿದೆ.
ಮಕ್ಕಳ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಈಗಲೇ ಎಲ್ಲ ದಾಖಲೆ ಸರಿಪಡಿಸಿಕೊಳ್ಳಬೇಕಿದೆ. ಮುಂದೆ ಸಿಇಟಿ ಸಂದರ್ಭದಲ್ಲಿ ಅಥವಾ ಪಾಸ್ಪೋರ್ಟ್ ಮಾಡಿಸುವ ಸಂದರ್ಭದಲ್ಲಿ ಶಾಲಾ ದಾಖಲಾತಿ, ಜನ್ಮ ದಾಖಲೆ ಹಾಗೂ ಆಧಾರ್ನಲ್ಲಿ ವಿದ್ಯಾರ್ಥಿಯ ಹೆಸರು ಏಕಪ್ರಕರಾವೇ ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಶೈಕ್ಷಣಿಕ ಅವಕಾಶ ಅಥವಾ ವಿದೇಶದಲ್ಲಿ ಉದ್ಯೋಗಾವಕಾಶದಿಂದ ವಂಚಿತರಾಗಬೇಕಾಗುತ್ತದೆ.
ಒಂದೊಂದು ಶಾಲೆಯ ನೋಂದಣಿ ಫಾರ್ಮ್ ಒಂದೊಂದು ರೀತಿ ಇದೆ. ಉದ್ಯೋಗ ನಿಮಿತ್ತ ಅನ್ಯ ಜಿಲ್ಲೆಗೆ ವರ್ಗಾವಣೆಗೊಂಡು ಬಂದಂತಹ ಪಾಲಕರಿಗೆಲ್ಲ ಈಗ ಸಮಸ್ಯೆಯಾಗಿದೆ. ಮೊದಲು ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ನೋಂದಣಿ ಫಾರ್ಮ್ ನಲ್ಲಿ ಏಕರೂಪಗೊಳಿಸಿ. ಅದನ್ನು ಬಿಟ್ಟು ಸರಿ ಇರುವ ದಾಖಲೆಯನ್ನೇ ಸರಿಮಾಡಿಕೊಂಡು ಬನ್ನಿ ಎಂದರೆ ಹೇಗೆ? ಇದೆಂತಹ ವ್ಯವಸ್ಥೆ?| ಹೆಸರು ಹೇಳಲಿಚ್ಛಿಸದ ಪಾಲಕ
ಇನ್ನೂ ಅನೇಕ ಮಕ್ಕಳು ಆಧಾರ್ ಕಾರ್ಡ್ ಮಾಡಿಸಿಲ್ಲ. ಯಾರು ಆಧಾರ್ ಮಾಡಿಸಿಲ್ಲವೋ ಅವರು ಕೂಡಲೇ ಮಾಡಿಸಬೇಕು. ಶಾಲಾ ದಾಖಲಾತಿಗೆ ಸರಿಹೊಂದುವಂತೆ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಲು ಪಾಲಕರು-ಶಿಕ್ಷಕರು ಕ್ರಮ ವಹಿಸಬೇಕು. ಇದು ವಿದ್ಯಾರ್ಥಿ ವೇತನ, ಮುಂದಿನ ಶೈಕ್ಷಣಿಕ ಸೌಲಭ್ಯಗಳಿಗೆ ಅತ್ಯಂತ ಮಹತ್ವದ್ದಾಗಿರುತ್ತದೆ. | ಗಣಪತಿ ಕೆ. ಡಿಡಿಪಿಐ, ಉಡುಪಿ