

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಿಂದ ಕಿತ್ತೂರು ಮಾರ್ಗವಾಗಿ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಾಯ್ತೆರಿದಿರುವ ಗುಂಡಿಗಳಿಂದ ವಾಹನ ಸವಾರರನ್ನು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಭಯದಲ್ಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಬೆಟ್ಟದಪುರದ ಹರದೂರು ಗೇಟ್ ಬಳಿಯ ಮುಖ್ಯರಸ್ತೆಯಲ್ಲಿ ಜೆಜೆಎಂ(ಜಲಜೀವನ್ ಮಿಷನ್) ಕಾಮಗಾರಿಗೆ ಡಾಂಬರು ರಸ್ತೆಯನ್ನು ಅಗೆಯಲಾಗಿತ್ತು. ಆದರೆ, ಕಾಮಗಾರಿ ಬಹುತೇಕ ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ಗುಂಡಿಗಳಿಗೆ ಮುಕ್ತಿ ನೀಡದ ಪರಿಣಾಮ ಒಂದಲ್ಲ ಒಂದು ಸಮಸ್ಯೆಗಳು ನಿತ್ಯ ಉಂಟಾಗುತ್ತಿವೆ.
ಜಲಜೀವನ ಮಿಷನ್ ಕಾಮಗಾರಿ ಸಂದರ್ಭ ಒಂದು ಬದಿಯಿಂದ ಮತ್ತೊಂದು ಬದಿಗೆ ಪೈಪ್‌ಲೈನ್ ಅಳವಡಿಕೆ ಮಾಡುವಾಗ ಡಾಂಬರೀಕರಣಗೊಂಡ ರಸ್ತೆಯನ್ನೇ ಅಡ್ಡಲಾಗಿ ಅಗೆದು ಪೈಪ್‌ಲೈನ್ ಮಾಡಲಾಗಿದೆ. ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಕೆಲಸ ಮುಗಿಸಿದ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿ ಡಾಂಬರೀಕರಣ ಮಾಡದ ಕಾರಣ ಅವ್ಯವಸ್ಥೆಯಾಗಿದೆ.
ಪ್ರಮುಖ ರಸ್ತೆಯಲ್ಲೇ ಅಧ್ವಾನ
ಬೆಟ್ಟದಪುರ ಮಾರ್ಗವಾಗಿ ಕಿತ್ತೂರು, ಹೊಸೂರು, ಚುಂಚನಕಟ್ಟೆ, ಕೆ.ಆರ್.ನಗರ ಸೇರಿದಂತೆ ಹಲವಾರು ಗ್ರಾಮ, ಪಟ್ಟಣಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಬೆಟ್ಟದಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಹಿನ್ನೆಲೆ ನಿತ್ಯ ಇಲ್ಲಿಗೆ ಸಾವಿರಾರು ಜನರು ವಾಣಿಜ್ಯ ವಹಿವಾಟು ಜತೆಗೆ ವಿವಿಧ ಕೆಲಸ ನಿಮಿತ್ತ ಬರುತ್ತಾರೆ. ಈ ರೀತಿಯಲ್ಲಿ ಜೆಜೆಎಂ ಕಾಮಗಾರಿಯಿಂದ ತೆಗೆದ ಗುಂಡಿಗಳಿಂದ ಅಪಾಯ ತಪ್ಪಿದ್ದಲ್ಲ. ಸವಾರರು ಒಂದು ಕ್ಷಣ ಎಚ್ಚರ ತಪ್ಪಿದರೂ, ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಪ್ರಮುಖ ರಸ್ತೆಯಲ್ಲಿಯೇ ಸಮಸ್ಯೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳ ಜಾಣಕುರುಡು ಪ್ರದರ್ಶನಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಂಚಾರ ಕಷ್ಟಕರ
ಈ ಭಾಗದಲ್ಲಿ ಬಹುತೇಕ ಜೆಜೆಎಂ(ಜಲಜೀವನ್ ಮಿಷನ್) ಕಾಮಗಾರಿಯಾಗಿ ವರ್ಷಗಳೇ ಮುಗಿಯುತ್ತ ಬಂದಿದೆ. ಆದರೆ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅಲ್ಲದೆ ಈ ಗುಂಡಿಯಿಂದ ನಿತ್ಯ ಒಬ್ಬರಲ್ಲ ಒಬ್ಬರು ವಾಹನದಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ಸಂಚಾರ ಮಾಡುವ ವಾಹನ ಸವಾರರು ಏಕಾಏಕಿ ಗುಂಡಿ ಕಾಣದೇ ಗುಂಡಿಗೆ ವಾಹನ ಬಿಟ್ಟ ಪರಿಣಾಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ವಾಸಿಸುವಂತಹ ಸ್ಥಳೀಯರು ರಾತ್ರಿ ಸಂದರ್ಭದಲ್ಲಿ ಉಂಟಾಗುವ ಅಪಘಾತಗಳ ಶಬ್ದಕ್ಕೆ ಎಚ್ಚರಗೊಂಡು ಓಡಿಹೋಗಿ ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ.
ಹರದೂರು ಗೇಟ್ ಭಾಗದಲ್ಲಿ ಸೌಲಭ್ಯ ಸಿಕ್ಕಿಲ್ಲ ಹರದೂರು ಗೇಟ್ ಭಾಗದಲ್ಲಿ ಹಲವು ನಿವಾಸಿಗಳು ವಾಸ ಮಾಡುತ್ತಿದ್ದರೂ ಇದುವರೆಗೆ ಅವರ ಮನೆ ಬಾಗಿಲಿಗೆ ಜಲ ಜೀವನ ಮಿಷನ್ ಯೋಜನೆಯ ಸೌಲಭ್ಯ ದೊರಕಿಲ್ಲ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಂಡು ರಸ್ತೆಯಲ್ಲಿ ಬಾಯಿ ತೆರೆದಿರುವ ಬೃಹತ್ ಗುಂಡಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಬೆಟ್ಟದಪುರದ ಹರದೂರು ಗೇಟ್ ಬಳಿಯ ಮುಖ್ಯರಸ್ತೆಯಲ್ಲಿ ಉಂಟಾಗಿರುವ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಕಡೆಯಿಂದ ಗುಂಡಿಗಳನ್ನು ಮುಚ್ಚುತ್ತ ಬರುತ್ತಿದ್ದಾರೆ. ಅದರಂತೆ ಇಲ್ಲಿಗೂ ಶಾಶ್ವತ ಪರಿಹಾರ ಒದಗಿಸಲಾಗುವುದು. ಕೃಷ್ಣಮೂರ್ತಿ ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಿರಿಯಾಪಟ್ಟಣ ಜೆಜೆಎಂ ಕಾಮಗಾರಿ ಮಾಡುವ ಸಂದರ್ಭ ಬೆಟ್ಟದಪುರದ ಹರದೂರು ಗೇಟ್ ಬಳಿಯ ಮುಖ್ಯರಸ್ತೆಯಲ್ಲಿ ಉಂಟಾಗಿರುವ ಗುಂಡಿಯಿಂದ ನಿತ್ಯ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸಮಸ್ಯೆ ಬಗ್ಗೆ ತಿಳಿಸಿದರೂ ಮಣ್ಣು ಹಾಕಿ ಗುಂಡಿ ಮುಚ್ಚುವಂತಹ ಕೆಲಸ ಮಾಡಿ, ಕಣ್ಣು ವರೆಸುತ್ತಿದ್ದಾರೆ. ಅಲ್ಲದೆ ಈ ಭಾಗದ ಹಲವು ಸ್ಥಳೀಯ ನಿವಾಸಿಗಳ ಮನೆಗಳಿಗೆ ಇನ್ನೂ ಜೆಜೆಎಂ (ಜಲಜೀವನ ಮಿಷನ್) ಕಾಮಗಾರಿಯ ಪ್ರಯೋಜನ ಲಭಿಸದೆ ಇರುವುದು ವಿಷಾದಕರ ಸಂಗತಿಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ವರದರಾಜು ಸ್ಥಳೀಯ ನಿವಾಸಿ, ಬೆಟ್ಟದಪುರ