

ಕೊಳ್ಳೇಗಾಲ: ಲಿಂಗಾಯತ ಧರ್ಮದ ಮೂಲ ತತ್ವಗಳ ಬಗ್ಗೆ ಅರಿವಿಲ್ಲದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಮೈಸೂರಿನ ಕುಂದೂರು ಮಠದ ಡಾ.ಶ್ರೀ ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಆಲಹಳ್ಳಿ ಪಟ್ಟದ ಮಠದ ಆವರಣದಲ್ಲಿ ಸೋಮವಾರ ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ ಹಾಗು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ನಮಗೆ ಎಲ್ಲ ಗೊತ್ತಿದ್ದರೂ ಏನು ಗೊತ್ತಿಲ್ಲದಂತೆ ಇರುತ್ತೇವೆ. ದೊಡ್ಡ ದೊಡ್ಡ ವಿಚಾರಗಳನ್ನು ಮಾತನಾಡುವ ಜ್ಞಾನ ಇದ್ದರೂ ನಮ್ಮ ಮನೆ, ನಮ್ಮೊಳಗೆ ಏನಾಗುತ್ತಿದೆ ಎಂದು ಗೊತ್ತಿಲ್ಲದೆ ಇರುವುದು ದುರಂತ, ಲಿಂಗಾಯತ ಧರ್ಮದ ಮೂಲ ತತ್ವಗಳ ಬಗ್ಗೆ ಅರಿವಿಲ್ಲದೆ ಇರುವುದು ದೊಡ್ಡ ಸಮಸ್ಯೆಯಾಗಿದೆ ಎಂದರು.
ಅಣ್ಣ ಬಸವಣ್ಣ ಅವರು ಬರುವ ಕಾಲಕ್ಕೆ ಸಾಮಾಜಿಕ ಪರಿಸ್ಥಿತಿ ತುಂಬ ಕೆಟ್ಟಿದ್ದರಿಂದ ಅದರಿಂದ ಮುಕ್ತಿ ಮಾಡುವ ಸಲುವಾಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಧರ್ಮ ನಿಂತ ನೀರಾಗಬಾರದು, ಅರಿಯುವ ನೀರಿನಂತೆ ತಿಳಿಯಾಗಿರಬೇಕು. ಸಮಾನತೆ, ಧಾರ್ಮಿಕ ಸ್ವಾತಂತ್ರ್ಯವನ್ನು ಕೊಡುವ ಮೂಲಕ ಧರ್ಮಕ್ಕೆ ಹೊಸ ಆಯಾಮ ನೀಡಿದವರು ಬಸವಣ್ಣ. ಪ್ರತಿಯೊಬ್ಬ ಲಿಂಗಾಯತರು ಅವರನ್ನು ಸ್ಮರಿಸಬೇಕು ಎಂದರು.
ಕುಂಬಕರ್ಣ ನಿದ್ರೆಯಲ್ಲಿರುವ ಲಿಂಗಾಯತ ಸಮುದಾಯವನ್ನ ಮತ್ತೆ ಎಬ್ಬಿಸಬೇಕು ಎಂಬ ಕಾರಣಕ್ಕೆ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಜಾಗತಿಕ ಮಹಾಸಭೆ ಮಾಡುತ್ತಿದೆ. ಇದು ಪ್ರತಿ ಹಳ್ಳಿಗಳಲ್ಲಿಯೂ ನಡೆಯಬೇಕಿದೆ .ಧರ್ಮದ ನಿಜಾಚರಣೆಗಳನ್ನು ಮತ್ತೆ ಅಳವಡಿಸಿಕೊಳ್ಳುವ ಮೂಲಕ ಲಿಂಗಾಯತ ಧರ್ಮ ಉಳಿಸಿ ಬೆಳೆಸಬೇಕಿದೆ ಎಂದರು.
ಜಾಗತೀಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಿಂದುಲೋಕೇಶ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಬಸವ ಧರ್ಮವು, 21ನೇ ಶತಮಾನದಲ್ಲೂ ಸಹ ಜಾಗೃತಿ ಹಂತದಲ್ಲಿ ಇರುವುದು ನಮ್ಮೆಲ್ಲರ ದುರ್ದೈವ. ಮುಂದಿನ ದಿನಗಳಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಕೇಳುವ ಸಲುವಾಗಿ ನಾವೆಲ್ಲರೂ ಜಾಗತಿಕ ಲಿಂಗಾಯತ ಮಹಾಸಭಾವನ್ನ ಬೆಂಬಲಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಗೌರವ ಅಧ್ಯಕ್ಷರು ಹಾಗೂ ಕಾಮಗೆರೆ ಮಠದ ಶ್ರೀ ಇಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಆಲಹಳ್ಳಿ ಪಟ್ಟದ ಮಠದ ಶ್ರೀ ಇಮ್ಮಡಿ ಬಸಪ್ಪ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ. ಕೆಸ್ತೂರು ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ, ಹೊಂಡರಬಾಳು ಮಠದ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲಕವಾಡಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಭಾಣಹಳ್ಳಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಜ್ಜಿಹುಂಡಿ ಶ್ರೀ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಸಾಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಕಜ್ಜಿಹುಂಡಿ ಮಹಾದೇವಸ್ವಾಮಿ, ಆಲಹಳ್ಳಿ ಕೂಸಪ್ಪ, ಮಾಲಂಗಿ ಪ್ರಕಾಶ್, ಪ್ರಸಾದ್, ರಘು, ನಟೇಶ್, ಮುಡಿಗುಂಡ ಷಣ್ಮುಖಸ್ವಾಮಿ, ಮಾಲಂಗಿ ಕುಮಾರ್ ಮತ್ತಿತರರಿದ್ದರು.