ಕಾರ್ಕಳದಲ್ಲಿ ಚರಂಡಿಗಳದ್ದೇ ಸಮಸ್ಯೆ!

malegala siddhate
ಕಾರ್ಕಳ ನಗರದ ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿಯಿಂದ ಚರಂಡಿಗಳೇ ಇಲ್ಲವಾಗಿರುವುದು.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಳೆಗಾಲ ಸಮೀಪಿಸುತ್ತಿದ್ದು, ತಾಲೂಕಿನಾದ್ಯಂತ ಈಗಾಗಲೇ ಹಲವೆಡೆ ಮಳೆಯೂ ಆಗಾಗ ಸುರಿಯುತ್ತಿದೆ. ಆದರೆ ಪುರಸಭೆ ಹಾಗೂ ತಾಲೂಕು ಆಡಳಿತ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇನ್ನಷ್ಟೇ ಮಳೆಗಾಲದ ತಯಾರಿ ಆರಂಭವಾಗಬೇಕಿದೆ.

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಪ್ರತೀ ವರ್ಷವೂ ಮಳೆಗಾಲ ಆರಂಭವಾದಾಗ ಒಳ ಚರಂಡಿ ವ್ಯವಸ್ಥೆಯದ್ದೇ ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿಯೂ ಅದುವೇ ದೊಡ್ಡ ಸವಾಲಾಗಿದೆ. ನಗರದ ಪ್ರಮುಖ ಕೆಲವೊಂದು ಪ್ರದೇಶದ ಕೆಲವೆಡೆ ಒಳಚರಂಡಿಗಳನ್ನು ಅಗೆದು ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಹಲವೆಡೆ ಚರಂಡಿ ದುರಸ್ತಿಗೆ ಪುರಸಭೆ ಮುಂದಾಗಿದ್ದರೂ ಮಳೆಗಾಲದಲ್ಲಿ ಮತ್ತೊಮ್ಮೆ ತೊಂದರೆ ಎದುರಾಗುವ ಸಂಭವವಿದೆ. ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ಜನಸಾಮಾನ್ಯರಿಗೆ ನಡೆದಾಡಲು ಕಷ್ಟವಾಗುತ್ತಿದೆ.

ಪೈಪ್‌ಪೈನ್ ಕಾಮಗಾರಿಯಿಂದ ತಡೆ: ಬಹುತೇಕ ಕಡೆಗಳಲ್ಲಿ ಪೈಪ್‌ಲೈನ್ ಕಾಮಗಾರಿಯಿಂದ ಚರಂಡಿಗಳು ಮುಚ್ಚಿಹೋಗಿವೆ. ಧಾರಾಕಾರ ಮಳೆಯಾದರೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳ ಮೇಲೆ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ.

ಯಾವ ಪ್ರದೇಶಗಳಲ್ಲಿ ಚರಂಡಿಗಳಿಲ್ಲ?

ಕಾರ್ಕಳ-ಪಡುಬಿದ್ರಿ ಸಾಗುವ ರಾಜ್ಯ ಹೆದ್ದಾರಿ, ಕಾರ್ಕಳ-ಮೂಡಬಿದಿರೆ ಹೆದ್ದಾರಿ, ಉಡುಪಿ ಸಾಗುವ ರಸ್ತೆ ಸಹಿತ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಳಲ್ಲೆಲ್ಲ ಮಣ್ಣು ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿಯಲು ತಡೆಯಾಗಿದೆ. ಶೀಘ್ರವೇ ದುರಸ್ತಿ ಕೈಗೊಳ್ಳದಿದ್ದಲ್ಲಿ ಈ ಬಾರಿಯೂ ಚರಂಡಿ ಸಮಸ್ಯೆ, ಕೊಳಚೆ ನೀರಿನ ಗೋಳು ಮುಂದುವರಿಯಲಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ ಚರಂಡಿ ನಿರ್ಮಾಣ ಸಹಿತ ಮಳೆಗಾಲಕ್ಕೆ ಅಗತ್ಯವುಳ್ಳ ಪೂರ್ವ ತಯಾರಿ ಕುರಿತು ಗಮನ ಹರಿಸಬೇಕು ಎಂದು ಕಾರ್ಕಳ ತಾಲೂಕಿನ ಜನತೆ ಆಗ್ರಹಿಸಿದ್ದಾರೆ.

ಈ ವರ್ಷ ಅಧಿಕ ಮಳೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಭಾರಿ ಮಳೆಯಾದರೆ ತಾಲೂಕಿನಾದ್ಯಂತ ಕೃತಕ ನೆರೆ ಉಂಟಾಗುವುದರಲ್ಲಿ ಸಂದೇಹವಿಲ್ಲ. ಕಾರ್ಕಳ ಕ್ಷೇತ್ರಾದ್ಯಂತ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆ ಬದಿಗಳಲ್ಲಿ ಅಗೆದಿರುವ ಪರಿರಣಾಮ ಚರಂಡಿ ಇಲ್ಲವಾಗಿದ್ದು, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ನೆರೆ ಸಹಿತ ಯಾವುದಾದರೂ ಪ್ರಾಕೃತಿಕ ವಿಕೋಪ ಸಂಭವಿಸಿದಾಗಷ್ಟೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಾರೆ. ಸುಕೇಶ್, ಗ್ರಾಮಸ್ಥ. https://www.vijayavani.net/donor-contributions-are-important-to-save-rural-schools https://www.vijayavani.net/billava-trophy-cricket-match

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net