

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅವರಿಗೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಟೀಕಿಸದೇ ಇದ್ದರೆ ತಿಂದ ಅಹಾರ ಜೀರ್ಣವಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಗುರುವಾರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ಸುಳ್ಳೇ ಗ್ಯಾರಂಟಿ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳು ಜನಪರವಾಗಿವೆ. ಪ್ರಕಟಿಸಿರುವ ಪ್ರಣಾಳಿಕೆಯನ್ನು ನಾವು ಅಧಿಕಾರಕ್ಕೆ ಬಂದರೆ ನಿಶ್ಚಿತವಾಗಿಯೂ ಜಾರಿಗೊಳಿಸುತ್ತೇವೆ. ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ನರೇಗಾ ಕೂಲಿಯನ್ನು 400 ರೂ.ಗೆ ಹೆಚ್ಚಿಸಲಾಗುವುದು. ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ನಾವು ಅದನ್ನು ಸರಿಪಡಿಸುತ್ತೇವೆ ಎಂದರು ಹೇಳಿದರು.
ಮೋದಿ ಅವರಿಗೆ ಚುನಾವಣೆ ಬಂದಾಗ ಮಾತ್ರ ಕರ್ನಾಟಕದ ಮೇಲೆ ಪ್ರೀತಿ ಉಕ್ಕುತ್ತದೆ. ಇಲ್ಲಿನ ಜನರ ಮೇಲೆ ಕಾಳಜಿ ತೋರುತ್ತಾರೆ. ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ಅವರೆಂದೂ ನೆರವು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದರು. ಸುಮಲತಾ ಕೂಡಾ ಬಿಜೆಪಿ ಬೆಂಬಲಿಸಿದರು. ಇವರ ಪೈಕಿ ಯಾರೊಬ್ಬರೂ ಕರ್ನಾಟಕಕ್ಕೆ ಉಂಟಾದ ಅನ್ಯಾಯದ ಬಗ್ಗೆ ಸಂಸತ್‌ನಲ್ಲಿ ಉಸಿರೆತ್ತಲಿಲ್ಲ. ರಾಜ್ಯದಲ್ಲಿ ಬರ ಉಂಟಾಗಿ ತೀರ್ವ ನಷ್ಟ ಸಂಭವಿಸಿದರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ ಎಂದು ಆರೋಪಿಸಿದರು.
ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ನಟ ಶಿವರಾಜ್‌ಕುಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಪ್ರಮುಖರಾದ ಆಯನೂರು ಮಂಜುನಾಥ್, ಎಂ.ಶ್ರೀಕಾಂತ್, ಎನ್.ರಮೇಶ್ ಮುಂತಾದವರಿದ್ದರು.