ಸಾಧಕರ ಉನ್ನತಿಗೆ ಮೂಲತಾಣ ಪ್ರೇರಣೆ

SANMAN
Published on

ಗೋಕರ್ಣ: ಪುಟ್ಟ ಸಸಿ ಹೆಮ್ಮರವಾಗಿ ಬೆಳೆಯಲು ಅದರ ತಾಯಿ ಬೇರಿನ ಸಾರಸತ್ವ ಕಾರಣವಾದಂತೆ. ಒಬ್ಬ ವ್ಯಕ್ತಿಯ ಸಾಧನೆ ಹಿಂದೆ ಆತನ ಮೂಲತಾಣ ಪಾಲಕರ ಪ್ರೇರಣೆಯಾಗಿದೆ. ಇದಕ್ಕೆ ಮೂಲತಃ ಗೋಕರ್ಣದವರಾದ ಐಎಎಸ್ ಅಧಿಕಾರಿ, ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ನಿತಿನ್ ರಮೇಶ ಗೋಕರ್ಣ ವರ್ತಮಾನದ ಉದಾಹರಣೆಯಾಗಿದ್ದಾರೆ ಎಂದು ಇಲ್ಲಿನ ಶ್ರೀ ಭದ್ರಕಾಳಿ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಆರ್. ಮಲ್ಲನ್ ಹೇಳಿದರು.

ಇಲ್ಲಿನ ಶ್ರೀ ಭದ್ರಕಾಳಿ ಕಾಲೇಜಿನಲ್ಲಿ ಡಾ. ನಿತಿನ್ ಗೋಕರ್ಣ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ಡಾ. ನಿತಿನ್ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗೋಕರ್ಣದ ಪುರಾಣ- ಇತಿಹಾಸದ ಕುರಿತ ತಮ್ಮ ನೂತನ ಕೃತಿ ‘ಗೋಕರ್ಣ ಅಕ್ರೋಸ್ ಭಾರತ’ ಮೂಲಕ ಗೋಕರ್ಣವನ್ನು ವಿಶ್ವ ಸ್ತರಕ್ಕೆ ಪರಿಚಯಿಸುವ ಮುಖೇನ ನಿತಿನ್ ಅವರು ತಮ್ಮ ಮೂಲಸ್ಥಾನದ ಸಂಸ್ಮರಣೆಯನ್ನು ಚಿರಸ್ಥಾಯಿಯಾಗಿಸಿದ್ದಾರೆ. ವಾರಾಣಸಿಯ ಜಿಲ್ಲಾಧಿಕಾರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು, ವಿನೂತನ ಕಾಶಿ ಕಾರಿಡಾರ್ ನಿರ್ವಣದ ಮೂಲ ರೂವಾರಿಗಳಾಗಿರುವುದು ಗೋಕರ್ಣದ ಹೆಮ್ಮೆಯಾಗಿದೆ ಎಂದರು.

ಡಾ. ನಿತಿನ್ ಗೋಕರ್ಣ ಮಾತನಾಡಿ, ನಾನು ಐಪಿಎಸ್ ಅಧಿಕಾರಿಯಾಗಿ ನಂತರ ಐಎಎಸ್ ಅಧಿಕಾರಿಯಾಗಲು ಗೋಕರ್ಣದ ಸಂಸ್ಕಾರ- ಸಂಸ್ಕೃತಿಗಳೇ ಆಶೀರ್ವಾದದಾಯಕವಾಗಿವೆ. ನನ್ನ ಸರ್ವ ಸಾಧನೆ ಮತ್ತು ಔನ್ನತ್ಯದ ಹಿಂದೆ ಗೋಕರ್ಣದ ದೈವಿಕ ಶಕ್ತಿಯೇ ಸಾರಸರ್ವಸ್ವವಾಗಿದೆ ಎಂದರು. ಕಾಲೇಜ್ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರಕಾಶ ಕಾಮತ ಅಭಿನಂದನಾ ನುಡಿಗಳನ್ನಾಡಿದರು.

ಆಡಳಿತ ಮಂಡಳಿ ಸದಸ್ಯರಾದ ಸುನೀಲ ಪೈ, ರವೀಂದ್ರ ಕೊಡ್ಲೆಕೆರೆ, ಡಾ.ರಾಮಚಂದ್ರ ಮಲ್ಲನ್, ಮಹೇಶ ಶೆಟ್ಟಿ, ಮುಖ್ಯ ಶಿಕ್ಷಕ ಸಿ.ಜಿ. ನಾಯ್ಕ ದೊರೆ, ಚಾಮಿ ವಿದ್ಯಾ ವಾಹಿನಿ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್, ಉಪನ್ಯಾಸಕ ರಾಮಮಮೂರ್ತಿ ನಾಯಕ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಎಸ್.ಸಿ. ನಾಯಕ, ಉಪನ್ಯಾಸಕ ಎನ್.ಎಸ್. ಲಮಾಣಿ, ಮುಖ್ಯಾಧ್ಯಾಪಕಿ ರೇವತಿ ಮಲ್ಲನ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net