ದುಶ್ಚಟಗಳ ಭಿಕ್ಷೆ ಬೇಡಿದ ಶ್ರೀಗಳು

The priests who begged for evil deeds
ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಮಖಂಡಿ ಓಲೇಮಠದ ಆನಂದ ದೇವರು ಗ್ರಾಮಸ್ಥರಿಂದ ದುಶ್ಚಟಗಳ ಭಿಕ್ಷೆ ಬೇಡಿದರು.
Published on

ಜಮಖಂಡಿ: ತಾಲೂಕಿನ ಕಡಕೋಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಭಾಗವಾಗಿ ಜಮಖಂಡಿ ಓಲೇಮಠದ ಆನಂದ ದೇವರು ಗ್ರಾಮದಲ್ಲಿ ಬುಧವಾರ ಜೋಳಿಗೆ ಹಿಡಿದು ಪಾದಯಾತ್ರೆ ನಡೆಸಿ ಗ್ರಾಮಸ್ಥರಿಂದ ದುಶ್ಚಟಗಳ ಭಿಕ್ಷೆ ಬೇಡಿದರು.

ಗ್ರಾಮಸ್ಥರನ್ನು ದುಶ್ಚಟಗಳಿಂದ ಬಿಡಿಸುವ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಕಾರ್ಯಕ್ರಮದ ಮೂಲಕ ಶ್ರೀಗಳು ಗ್ರಾಮದಲ್ಲಿ ಬೆಳಗ್ಗೆ ಜೋಳಿಗೆ ಹಿಡಿದು ಪಾದಯಾತ್ರೆ ಕೈಗೊಂಡಿದ್ದರು.

ತಮ್ಮ ತಂದೆ-ತಾಯಿಗಳಿಗೆ ಆಸರೆ ಆಗಬೇಕಾದ ಯುವಕರು ದುಶ್ಚಟಗಳ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಿ ಯುವಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಕೇವಲ ಬೀಡಿ, ಸಿಗಾರೇಟ್ ಸೇದುವುದು, ಗುಟ್ಕಾ, ತಂಬಾಕು ತಿನ್ನುವುದು ಹಾಗೂ ಸಾರಾಯಿ ಸೇವಿಸುವುದು ಮಾತ್ರ ದುಶ್ಚಟವಲ್ಲ. ಬದಲಾಗಿ ಸುಳ್ಳು ಹೇಳುವುದು, ಮೋಸ, ವಂಚನೆ ಮಾಡುವುದು, ಇನ್ನೊಬ್ಬರಿಗೆ ನೋವು ಕೊಡುವುದು ಮತ್ತು ತೊಂದರೆ ಮಾಡುವುದು ಕೂಡ ದುಶ್ಚಟವೇ ಆಗಿದೆ ಎಂದು ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

ಸುಮಾರು 40 ಜನ ಗ್ರಾಮಸ್ಥರು ತಮ್ಮ ದುಶ್ಚಟಗಳಿಗೆ ಬಳಸುವ ವಸ್ತುಗಳನ್ನು ಶ್ರೀಗಳ ಜೋಳಿಗೆಗೆ ಹಾಕಿ ದುಶ್ಚಟಗಳನ್ನು ತ್ಯಜಿಸುವುದಾಗಿ ವಚನ ಕೊಟ್ಟರು. ದುಶ್ಚಟ ತ್ಯಜಿಸಿದ ಯುವಕರ ತಲೆ ಮೇಲೆ ತೀರ್ಥ ಹಾಕಿ ಶ್ರೀಗಳು ಆಶೀರ್ವಾದ ಮಾಡಿದರು.

ರಾಚಯ್ಯ ಮಠಪತಿ, ಶ್ರೀಶೈಲ ಗೊಂಗನವರ, ಶ್ರೀಶೈಲ ದೇಸಾಯಿ, ಕಾಡಪ್ಪ ದೇಸಾಯಿ, ಅಪ್ಪಾಸಾಹೇಬ ದೇವರವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net