

ಲಕ್ಷ್ಮೇಶ್ವರ: ಮುಂಗಾರಿನ ಪ್ರಮುಖ ಬೆಳೆ ಹೆಸರಿಗೆ ಬಂಗಾರದ ಬೆಲೆ ಬಂದಿದೆ. ಆದರೆ ಮಳೆ ಕೊರತೆ, ರೋಗಬಾಧೆಯಿಂದ ಇಳುವರಿ ಕುಸಿದಿದೆ.
ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹೆಸರಿಗೆ 9 ಸಾವಿರದಿಂದ 11 ಸಾವಿರ ರೂ. ವರೆಗೆ ಇದೆ. ಪಟ್ಟಣದ ಎಪಿಎಂಸಿಗೆ ವಾರದಿಂದ ಅಂದಾಜು 500 ಕ್ವಿಂಟಾಲ್ ಹೆಸರು ಆವಕವಾಗಿದೆ.
ತಪ್ಪಿದ ಲೆಕ್ಕಾಚಾರ: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಹೆಸರು ಬೆಳೆಗೆ 8,558 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಈ ಕಾರಣ ಹೆಚ್ಚಿನ ರೈತರು ಹೆಸರು ಬಿತ್ತನೆಗೆ ಮುಂದಾಗಿದ್ದರು. ಜೂನ್ ಮೊದಲ ವಾರದಲ್ಲಿ ಹೆಸರು ಬಿತ್ತನೆಯಾಗಬೇಕು. ಮಳೆ ಬಾರದ ಕಾರಣ ಜುಲೈ ತಿಂಗಳಿನಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದರು. ಲಕ್ಷ್ಮೇಶ್ವರ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಮಾಡಳ್ಳಿ ಹೆಸರು ಬಿತ್ತನೆಯ ಪ್ರಮುಖ ಕ್ಷೇತ್ರಗಳಾಗಿವೆ. ಆದರೆ ಈ ಬಾರಿ ತಾಲೂಕಿನಲ್ಲಿ ನಿಗದಿತ ಗುರಿಗಿಂತ ಶೇ 25ರಷ್ಟು ಮಾತ್ರ ಹೆಸರು ಬಿತ್ತನೆಯಾಗಿದೆ.
ಇಳುವರಿ ಕುಸಿತ: ಜುಲೈ ತಿಂಗಳಲ್ಲಿ ಹೆಸರು ಬೆಳೆಗೆ ರೋಗದ ಕಾಟ ಶುರುವಾಯಿತು. ಹೂವು ಬಿಟ್ಟ ಸಂದರ್ಭದಲ್ಲಿ ಮಳೆ ಕೈಕೊಟ್ಟಿತು.ಆಗಸ್ಟ್‌ನಲ್ಲಿ ಹನಿ ಮಳೆಯೂ ಆಗಿಲ್ಲ. ಬೀಜ, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆಗಾಗಿ ಪ್ರತಿ ಎಕರೆಗೆ ಕನಿಷ್ಠ 10 ಸಾವಿರ ರೂ. ಖರ್ಚು ಮಾಡಲಾಗಿದೆ. ಸರಾಸರಿ 5 ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು 2ರಿಂದ 3 ಕ್ವಿಂಟಾಲ್‌ಗೆ ತೃಪ್ತಿಪಟ್ಟುಕೊಳ್ಳಬೇಕಿದೆ.
‘ಮುಂಗಾರು ವಿಳಂಬದಿಂದ ಹೆಸರು ಬಿತ್ತನೆ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದೆ. ಜೂನ್, ಆಗಸ್ಟ್ ತಿಂಗಳಿನಲ್ಲಿ ಮಳೆಯೇ ಆಗಲಿಲ್ಲ, ತೇವಾಂಶ ಕೊರತೆಯಿಂದ ಇಳುವರಿ ಕಡಿಮೆಯಾಗಿದೆ. ಉಳಿದೆಲ್ಲ ಮುಂಗಾರಿನ ಬೆಳೆಗಳು ಒಣಗುತ್ತಿವೆ. ಮಳೆ ಕೊರತೆ, ಬಿತ್ತನೆ ಕ್ಷೇತ್ರ, ಬೆಳೆವಿಮೆ ಪಾವತಿಸಿರುವ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ.