

ಮಹಾಲಿಂಗಪುರ: ರೈತರು ಋತು ಆಧಾರಿತ ಬೆಳೆ ಪದ್ಧತಿ ಅನುಸರಿಸಿದರೆ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಹಾಗೂ ವರ್ಷಕ್ಕೊಮ್ಮೆ ಆದಾಯ ಬರುತ್ತದೆ ಎಂದು ರಾಯಚೂರಿನ ಕವಿತಾಳದ ಶ್ರೀಗಂಧ ಕೃಷಿಕರಾದ ಕವಿತಾ ಮಿಶ್ರಾ ಹೇಳಿದರು.
ಢವಳೇಶ್ವರ ಗ್ರಾಮದ ದಡ್ಡೆಮ್ಮ ದೇವಸ್ಥಾನದ ಹತ್ತಿರ ಇರುವ ಸ್ಥಳೀಯ ಪ್ರಗತಿಪರ ರೈತ ಅಶೋಕಗೌಡ ಪಾಟೀಲ ಅವರ ತೋಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೃಷಿ ಅರಣ್ಯ ವಿಚಾರ ಸಂಕೀರ್ಣ ‘ಹಸಿರು ಹಬ್ಬ’ದಲ್ಲಿ ಮಾತನಾಡಿದ ಅವರು, ನಾನೇನೂ ಕೂಡಲೇ ಕೃಷಿಯಲ್ಲಿ ಆದಾಯ ಪಡೆದಿಲ್ಲ. ಸಾವಿರ ಸಲ ಬಿದ್ದೀನಿ. ಒಂದು ಸಲ ಎದ್ದೀನಿ. ಏಳು ಬೀಳು ಸಹಜ ಎಂದರು.
ಕರ್ನಾಟಕದ ಹೊನ್ನ ಕಳಸ ಶ್ರೀಗಂಧ ಜಗತ್ತಿನಲ್ಲಿಯೇ ಹೆಚ್ಚು ಎಣ್ಣೆ ಅಂಶ ಇರುವ ಗಿಡ. ಶ್ರೀಗಂಧದ ಜತೆಗೆ ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ತೊಡಗಿದರೆ ಮೂರು ತಿಂಗಳಿಗೊಮ್ಮೆ ಆದಾಯ ಬರುತ್ತದೆ. ಅತಿ ಹೆಚ್ಚು ನೀರನ್ನು ಬಯಸದ ಶ್ರೀಗಂಧ ಮಳೆಯಾಧಾರಿತ ಬೆಳೆ. ಸುತ್ತಲಿನ ಕಸವೇ ಅದಕ್ಕೆ ಗೊಬ್ಬರ. ಖರ್ಚು ವೆಚ್ಚ ಕಡಿಮೆ ಮತ್ತು ಕಾರ್ಮಿಕರ ಅವಶ್ಯಕತೆಯೇ ಇಲ್ಲ. ಕೇವಲ ಅದರ ಪಾಲನೆ ಪೋಷಣೆಗೆ ಕಣ್ಗಾವಲಿನ ಅಗತ್ಯತೆ ಮಾತ್ರ ಇದೆ. ಪ್ರಸ್ತುತ 1 ಕೆಜಿ ಶ್ರೀಗಂಧದ ಬೆಲೆ ಮಾರುಕಟ್ಟೆಯಲ್ಲಿ 15 ರಿಂದ 20 ಸಾವಿರ ಇದೆ. ಶ್ರೀಗಂಧ ಬೆಳೆದರೆ 10 ರಿಂದ 15 ವರ್ಷಗಳಲ್ಲಿ ರೈತರು 1 ಎಕರೆ ಭೂಮಿಯಿಂದ ಕನಿಷ್ಠ 3 ರಿಂದ 4 ಕೋಟಿ ರೂ. ಗಳಿಸಬಹುದು. ಹೆಣ್ಣು, ಹೊನ್ನು, ಮಣ್ಣು ಇವುಗಳ ಬೆಲೆ ಎಂದೂ ಕಡಿಮೆಯಾಗದು ಎಂದರು.
ಕುಷ್ಟಗಿಯ ಶ್ರೀಗಂಧ ಕೃಷಿಕ ರಮೇಶ ಬಲ್ಲುಟಗಿ ಮಾತನಾಡಿ, ಶ್ರೀಗಂಧ ವಿಶ್ವದ ಅತಿ ಹೆಚ್ಚು ಬೆಲೆ ಬಾಳುವ ಕೃಷಿ. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮೌಲ್ಯವರ್ಧನೆಯಾಗುತ್ತದೆ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿದರು. ರೈತ ಅಶೋಕಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಗಣ್ಯರಾದ ಶಂಕರಗೌಡ ಪಾಟೀಲ, ಗಿರೀಶಗೌಡ ಪಾಟೀಲ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ, ಮಲ್ಲನಗೌಡ ಪಾಟೀಲ, ರಾಮಣ್ಣ ಸಂಕ್ರಟ್ಟಿ, ಈರಪ್ಪ ದಿನ್ನಿಮನಿ, ಬಸವರಾಜ ಹಿಟ್ಟಿನಮಠ, ಶಿವನಗೌಡ ಪಾಟೀಲ, ಜಿ.ಎಸ್. ಗೊಂಬಿ, ಬಾಲಚಂದ್ರ ರೂಗಿ, ಮಹಾಲಿಂಗಪ್ಪ ಕೌಜಲಗಿ, ಪ್ರಕಾಶ ಅರಳಿಕಟ್ಟಿ ಇದ್ದರು.
ವೀಣಾ ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಶಿವಕುಮಾರಗೌಡ ಪಾಟೀಲ ಸ್ವಾಗತಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿದರು.