

ಹಿರಿಕರ ರವಿ ಸೋಮವಾರಪೇಟೆ
ಕಪ್ಪು ಚಿನ್ನ ಎಂದೇ ಹೆಸರಾಗಿರುವ ಕಾಳುಮೆಣಸಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
2016-17ರ ಸಾಲಿನಲ್ಲಿ ಒಣಗಿದ ಕಾಳುಮೆಣಸಿಗೆ ಕೆ.ಜಿಗೆ 750ರಿಂದ 800ರೂ.ಗಳ ದಾಖಲೆ ಬೆಲೆಯಿತ್ತು. ಕಳೆದ 7 ವರ್ಷಗಳಿಂದ ಬೆಲೆ ಸಿಕ್ಕಿರಲಿಲ್ಲ. ಕಳೆದ 15 ದಿನಗಳಿಂದ ಬೆಲೆ ಏರುತ್ತಿದೆ. ಗುರುವಾರಕ್ಕೆ 700 ರೂ. ಬಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಅಕಾಲಿಕ ಮಳೆ ಸುರಿದು ಕಾಫಿ ಹಣ್ಣು ಗಿಡದಿಂದ ಉದುರಿ ಮಣ್ಣು ಸೇರಿ, ಬೆಳೆಗಾರರು ಹೆಚ್ಚಿನ ನಷ್ಟ ಅನುಭವಿಸಿದ್ದರು. ಕಾಳುಮೆಣಸು ನಮ್ಮನ್ನು ಕಾಪಾಡಬೇಕು ಎಂದು ಭಾವಿಸಿದ್ದರು. ಈಗ ಕೃಷಿಕರನ್ನು ಕಾಳುಮೆಣಸು ರಕ್ಷಿಸುತ್ತಿದೆ.
ಪ್ರಸಕ್ತ ಸಾಲಿನಲ್ಲಿ ವಿಪರೀತ ಬಿಸಿಲಿನ ಪರಿಣಾಮ ಕೆಲ ಭಾಗದಲ್ಲಿ ಮೆಣಸು ಬಳ್ಳಿಗಳು ಸಂಪೂರ್ಣ ಒಣಗಿ ಹೋಗಿವೆ. ಫಸಲು ಹಾನಿಯಾಗಿತ್ತು. ಉಳಿದ ಕಾಳುಮೆಣಸು ಕೊಯ್ಲು ಮಾಡಿದ ಕೃಷಿಕರು ಕೆಜಿಗೆ 500 ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಕಾಳುಮೆಣಸನ್ನು ಸಂಗ್ರಹಿಸಿ ಇಟ್ಟವರಿಗೆ ಬಂಪರ್ ಲಾಟರಿ ಹೊಡೆದಂತೆ ಆಗಿದೆ.
ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಇತರ ಹವಾಮಾನ ಸಂಬಂಧಿತ ಬದಲಾವಣೆಯಿಂದ ಕಾಳುಮೆಣಸು ಉತ್ಪಾದಿಸುವ ವಿಯೆಟ್ನಾಂ, ಇಂಡೋನೇಷಿಯಾ, ಮಲೇಷಿಯಾ, ಬ್ರೆಜಿಲ್‌ನಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಜಾಗತಿಕ ಪೂರೈಕೆಯ ಶೇ.40 ರಷ್ಟು ಕಾಳುಮೆಣಸು ಉತ್ಪಾದಿಸುತ್ತಿರುವ ವಿಯಟ್ನಾಂ ನಲ್ಲಿ ಭಾರೀ ಮಳೆಯಿಂದ ಕಾಳುಮೆಣಸು ಉತ್ಪಾದನೆಯಾಗುತ್ತಿಲ್ಲ. ಕೃಷಿಕರು ಕೂಡ ಕೋಕೋ ಕೃಷಿಯತ್ತ ವಾಲುತ್ತಿರುವುದರಿಂದ ಉತ್ಪಾದನೆ ಕುಂಠಿತವಾಗಿದೆ ಎಂಬ ವರದಿಗಳು ಬಂದಿವೆ.
ಬ್ರೆಜಿಲ್‌ನಲ್ಲಿ ಅಸಾಧಾರಣ ಉಷ್ಣ ಹವಾಮಾನದಿಂದ ಶೇ.15 ರಷ್ಟು ಕುಸಿದಿದೆ ಎನ್ನಲಾಗಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಕೋಕೋ, ತಾಳೆ ಎಣ್ಣೆ ಮತ್ತು ದುರಿಯನ್ ಬೆಳೆ ರೈತರಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಸದಾ ರೋಗಬಾಧೆಗೆ ತುತ್ತಾಗುವ ಕಾಳುಮೆಣಸು ಕೃಷಿಯನ್ನು ತ್ಯಜಿಸುತ್ತಿರುವುದರಿಂದ ಕಾಳುಮೆಣಸಿಗೆ ಬೇಡಿಕೆ ಜಾಸ್ತಿಯಾಗಿ, ಬೆಲೆ ಏರಿಕೆಯಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಅಭಿಪ್ರಾಯಿಸಿದ್ದಾರೆ.
ತಾಲೂಕಿನಲ್ಲಿ 5 ಸಾವಿರ ಹೆಕ್ಟೇರ್‌ನಲ್ಲಿ ಕಾಳುಮೆಣಸು ಉತ್ಪಾದನೆಯಾಗುತ್ತಿದೆ. ವಿಯೆಟ್ನಾಂ ಮಾದರಿಯಲ್ಲಿಯೇ ಕೊಡಗಿನಲ್ಲೂ ಹವಾಮಾನ ವೈಪರೀತ್ಯದಿಂದ ಕಾಳುಮೆಣಸು ಉತ್ಪಾದನೆ ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ವಿಪರೀತ ಸುರಿಯುವ ಮುಂಗಾರು ಮಳೆ, ಹೆಚ್ಚಿನ ಬಿಸಲು ಇವೆಲ್ಲಾ ಕಾರಣಗಳಿಂದ ಬಳ್ಳಿಗಳು ರೋಗಬಾಧೆಯಿಂದ ಒಣಗುತ್ತಿವೆ. ಹೊಸದಾಗಿ ಬಳ್ಳಿ ನೆಟ್ಟರೂ ಆರೋಗ್ಯವಾಗಿ ಬಳ್ಳಿಗಳು ಹಬ್ಬುತ್ತಿಲ್ಲ. ಇಲ್ಲಿಯೂ ಉತ್ಪಾದನೆ ಕುಸಿಯುತ್ತಿದೆ. ಕೃಷಿಕರು ಫಸಲನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ ಹೋಬಳಿಗಳಲ್ಲಿ ಕೆರೆ ಹಾಗು ಕೊಳವೆಬಾವಿ ಸೌಲಭ್ಯವಿರುವ ರೈತರು ನೀರು ಹಾರಿಸಿ ಕಾಳುಮೆಣಸು ಪರಾಗಸ್ಪರ್ಶಕ್ಕೆ ಅನುವು ಮಾಡಿಕೊಟ್ಟಿರುವ ಪರಿಣಾಮ ಈ ವರ್ಷ ಫಸಲು ಸಿಕ್ಕಿದೆ. ಮಳೆಯನ್ನೇ ನಂಬಿಕೊಂಡವರ ಜಾಗದಲ್ಲಿ ಬಳ್ಳಿಗಳು ಒಣಗಿವೆ.
ಕೃಷಿಕರು ಅತಿ ಹೆಚ್ಚು ಕಾಳಜಿ ವಹಿಸಿ ಬೆಳೆಯುವ ಬೆಳೆ ಇದಾಗಿದೆ. ನಿರ್ವಹಣೆಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಬಳ್ಳಿಗಳು ಸಮೃದ್ಧವಾಗಿ ಬೆಳೆಯಬೇಕು. ರೋಗಮುಕ್ತವಾಗಿರಬೇಕು ಎಂಬ ಹಂಬಲದಿಂದ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚಿನ ಹಣವನ್ನು ವ್ಯಯಿಸಿದ್ದಾರೆ. ಹೆಚ್ಚಿನ ಬೆಲೆ ಸಿಕ್ಕರೆ ಮಾತ್ರ ಕಾಳುಮೆಣಸು ಕೃಷಿಯನ್ನು ಮುಂದುವರಿಸಬಹುದು ಎಂದು ಕೃಷಿಕರು ಹೇಳಿದರು.
ತಾಲೂಕಿನ ಬಹುತೇಕ ರೈತರು ಕಾಫಿ ತೋಟದೊಳಗೆ ನೆರಳಿಗಾಗಿ ಬೆಳೆದಿರುವ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಹಬ್ಬಿಸಿ, ಫಸಲು ತೆಗೆಯುತ್ತಿದ್ದಾರೆ. ಕೆಲ ವರ್ಷ ಉತ್ತಮ ಫಸಲಿನೊಂದಿಗೆ, ತೃಪ್ತಿಕರ ಬೆಲೆ ಸಿಗುತ್ತಿದ್ದ ಪರಿಣಾಮ ಕಾಫಿ ಬೆಳೆಗಾರರು ಆರ್ಥಿಕವಾಗಿ ಸಬಲರಾಗಿದ್ದರು. ಕಾಫಿ ಬೆಲೆ ಇಲ್ಲದ ಸಮಯದಲ್ಲಿ ಕಾಳುಮೆಣಸು ಬೆಳೆಗಾರರನ್ನು ರಕ್ಷಣೆ ಮಾಡಿದೆ.