

ಸುನಿಲ್ ಪೊನ್ನೇಟಿ ಮಡಿಕೇರಿ:
ಇದೀಗ ರೋಬಸ್ಟಾ ಕಾಫಿ ಕೊಯ್ಲಿನ ಅವಧಿಯಲ್ಲಿ ಬೆಳೆಗಾರರು ಒಂದೆಡೆ ಅಕಾಲಿಕ ಮಳೆ, ಮತ್ತೊಂದು ಕಡೆ ಕಾರ್ಮಿಕರ ಕೊರತೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಕಾಫಿಗೆ ಉತ್ತಮ ಬೆಲೆಯೂ ಇದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಈ ವರ್ಷ ಫಸಲು ಇಲ್ಲ. ಇದರ ಜತೆಗೆ ಕಳ್ಳರ ಕಾಟ ಕೂಡ ಅಧಿಕವಾಗಿದ್ದು, ಪೊಲೀಸರಿಗೂ ಇದು ತಲೆನೋವಾಗಿದೆ.
ಇಬ್ಬರು ಕಾಫಿ ಬೆಳೆಗಾರರು ಪರಸ್ಪರ ಎದುರಾದರೆ ಸಾಮಾನ್ಯವಾಗಿ ಉಭಯಕುಶಲೋಪರಿಯ ಮಾತುಕತೆ ಬಿಟ್ಟು, ಕಾಫಿ ಕೃಷಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಲ್ಲಿಂದಲೇ ಮಾತು ಶುರು ಮಾಡುವಂತಹ ವಾತಾವರಣ ನಿರ್ಮಾಣ ಆಗಿದೆ. ಕೊಯ್ಲು ಕಾರ್ಯಕ್ಕೆ ಎದುರಾಗಿರುವ ಕಾರ್ಮಿಕರ ಸಮಸ್ಯೆ, ಹೇಗೋ ಕಾರ್ಮಿಕರನ್ನು ಹೊಂದಿಸಿಕೊAಡು ಕಾಫಿ ಹಣ್ಣು ಕಿತ್ತು ಒಣಗಿಸಲು ಹೋದರೆ ಹೊತ್ತುಗೊತ್ತಿಲ್ಲದೆ ಸುರಿಯುವ ಮಳೆಯ ಆತಂಕ ಕಾಫಿ ಬೆಳೆಯ ಸಹವಾಸವೇ ಬೇಡ ಎನ್ನುವ ಭಾವನೆ ಬೆಳೆಗಾರರಲ್ಲಿ ಮೂಡುವಂತೆ ಮಾಡಿದೆ.
5 ತಾಲೂಕುಗಳನ್ನು ಒಳಗೊಂಡಿರುವ ಕೊಡಗು ಒಟ್ಟು 4,106 ಚ.ಕಿ.ಮೀ ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, 1,197 ಚ.ಕಿ.ಮೀ ಪ್ರದೇಶದ 1,06,921 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತದೆ. ಇದು ಕರ್ನಾಟಕದ ಒಟ್ಟು ಕಾಫಿ ಬೆಳೆಯುವ ಪ್ರದೇಶದ ಶೇ. 44ರಷ್ಟಿದೆ. ಜಿಲ್ಲೆಯ ಬಹುತೇಕ ಕಾಫಿ ತೋಟಗಳು 10 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣದ ಸಣ್ಣ ಬೆಳೆಗಾರರ ಒಡೆತನದಲ್ಲಿದೆ. ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 1,10,730 ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗುತ್ತದೆ. ಇದು ರಾಜ್ಯದ ಶೇ. 50 ಮತ್ತು ದೇಶದ ಕಾಫಿ ಉತ್ಪಾದನೆಯ ಶೇ.35 ರಷ್ಟಿದೆ. ಕಾಫಿಯು ಕೃಷಿ ಕಾರ್ಮಿಕ ಆಧಾರಿತವಾಗಿರುವುದರಿಂದ ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ.
ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಕೊಯ್ಲು ಕಾರ್ಯ ಈಗಾಗಲೇ ಬಹುತೇಕ ಮುಗಿದಿದೆ. ರೋಬಸ್ಟಾ ಕಾಫಿ ಕೊಯ್ಲು ಭರದಿಂದ ನಡೆಯುತ್ತಿದೆ. ಎಲ್ಲಾ ಕಡೆಯಲ್ಲೂ ಏಕಕಾಲದಲ್ಲಿ ಕಾಫಿ ಹಣ್ಣಾಗಿ ಕೊಯ್ಲಿಗೆ ಬರುವುದರಿಂದ ಗಿಡದಿಂದ ಉದುರಿ ಆಗುವ ನಷ್ಟದಿಂದ ಪಾರಾಗಲು ಬೆಳೆಗಾರರು ಆದಷ್ಟು ಬೇಗ ಕೊಯ್ಲು ಕಾರ್ಯ ಮುಗಿಸಲು ಪ್ರಯತ್ನಿಸುತ್ತಾರೆ. ಇದರ ಜತೆಗೆ ಈಗ ಅಕಾಲಿಕ ಮಳೆ ಸುರಿಯುತ್ತಿದ್ದು ಇದರಿಂದ ಆಗುವ ಹಾನಿ ತಪ್ಪಿಸಿಕೊಳ್ಳಲು ಕೂಡ ಕಾಫಿಯ ಶೀಘ್ರ ಕೊಯ್ಲು ಕಾರ್ಯಕ್ಕೆ ಬೆಳೆಗಾರರು ಆದ್ಯತೆ ಕೊಡುತ್ತಿದ್ದಾರೆ.
ಈ ಬಾರಿ ಅಕಾಲಿಕ ಮಳೆಯೂ ಕಾರ್ಮಿಕರ ಕೊರತೆಗೆ ಕಾರಣವಾಗಿದೆ. ಮಳೆಯಿಂದಾಗಿ ಗಿಡದಲ್ಲಿ ಇದ್ದ ಕಾಫಿ ಹಣ್ಣು ಉದುರುವುದಲ್ಲದೆ ಒಣಗಲು ಹಾಕಿದ್ದ ಕಾಫಿಯೂ ನೀರು ಸೇರಿ ಬೆಳೆಗಾರರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಕೆಲವು ಕಡೆ ಗಿಡದಲ್ಲಿ ಕಾಫಿ ಹಣ್ಣು ಇದ್ದಾಗಲೇ ಹೂವು ಕೂಡ ಅರಳಿರುವುದು ಬೆಳೆಗಾರರಿಗೆ ಮುಂದಿನ ವರ್ಷದ ಫಸಲಿನ ಬಗ್ಗೆ ಚಿಂತೆ ಮಾಡುವಂತೆ ಮಾಡಿದೆ. ಈಗಲೂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮೋಡದ ವಾತಾವರಣ ಇದ್ದು, ಯಾವಾಗ ಬೇಕಾದರೂ ಮಳೆ ಸುರಿಯುವ ಸಾಧ್ಯತೆ ಇರುವುದರಿಂದಲೂ ಕಾಫಿ ಕೊಯ್ಲು ಮಾಡಲು ಬೆಳೆಗಾರರು ಆತುರ ತೋರಿಸುತ್ತಿದ್ದಾರೆ. ಆದರೆ ಕಾರ್ಮಿಕರು ಮಾತ್ರ ಸಿಗುತ್ತಿಲ್ಲ.
ಈಗ ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಒಮ್ಮೆಲೇ ಕಾರ್ಮಿಕರಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ನಿಗದಿತ ಸಮಯಕ್ಕೆ ಕಾರ್ಮಿಕರ ಲಭ್ಯತೆ ಇಲ್ಲದೆ ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ತೋಟ ಮಾಲೀಕರು ಬೆಳ್ಳಂಬೆಳಗ್ಗೆ ಕಾರ್ಮಿಕರ ಮನೆಗಳಿಗೆ ತೆರಳಿ ತಮ್ಮಲ್ಲಿಗೆ ಕರೆದುಕೊಂಡು ಬರಲು ಪ್ರಯತ್ನಿಸಿದರೆ, ಅವರಾಗಲೇ ಮತ್ತೊಂದು ತೋಟದ ಮಾಲೀಕರಿಗೆ ಬುಕ್ ಆಗಿ ಬಿಟ್ಟಿರುತ್ತಾರೆ. ಕಾಫಿ ಕೊಯ್ಲು ಅವಧಿಯಲ್ಲಿ ಇದು ಸಾಮಾನ್ಯವಾದರೂ ಈ ವರ್ಷ ಹಿಂದೆAದಿಗಿAತೂ ಹೆಚ್ಚಿನ ಸಮಸ್ಯೆ ಕಾಣಿಸಿಕೊಂಡಿದೆ.
ತೋಟದ ನಿರ್ವಹಣೆ ದುಬಾರಿ ಆಗಿರುವ ಇಂದಿನ ದಿನಗಳಲ್ಲಿ ಬೆಳೆದು ನಿಂತಿರುವ ಫಸಲು ಕೈ ಸೇರದಿದ್ದರೆ ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆ ಬೆಳೆಗಾರರದ್ದು. ಕಾಪೀ ಕೊಯ್ಲಿನ ಸಮಯದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಕಾರ್ಮಿಕರು ಬಂದರೂ ಎಲ್ಲಾ ಕಡೆಯ ತೋಟಗಳಿಂದಲೂ ಒಮ್ಮಿಂದೊಮ್ಮೆಲೆ ಕಾರ್ಮಿಕರಿಗೆ ಬೇಡಿಕೆ ಜಾಸ್ತಿ ಆಗಿರುವುದರಿಂದ ಬೆಳೆಗಾರರ ಅಗತ್ಯತೆಗೆ ಅನುಗುಣವಾಗಿ ಕಾರ್ಮಿಕರು ಸಿಗುತ್ತಿಲ್ಲ.
ಇವೆಲ್ಲದರ ಮಧ್ಯೆ ಕಾಫಿ ಬೆಳೆಗಾರರು ಈಗ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ. ಎಲ್ಲ ತೊಂದರೆಗಳ ಜತೆ ಸೆಣೆಸಾಡಿ ಕೊನೆಗೆ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಕಣಕ್ಕೆ ತಂದು ಹಾಕಿದರೆ ಅಲ್ಲೂ ನೆಮ್ಮದಿ ಇಲ್ಲದಂತಾಗಿದೆ. ಈ ಬಾರಿ ಕಾಫಿಗೆ ಉತ್ತಮ ಬೆಲೆ ಇರುವುದರಿಂದ ಕಳ್ಳರ ಕಾಟ ಅಧಿಕವಾಗಿದ್ದು ಒಣ ಹಾಕಿದ ಕಾಫಿಯನ್ನು ಕಣದಿಂದಲೇ ದೋಚುವ ಖದೀಮರು ಎಲ್ಲಾ ಊರುಗಳಲ್ಲೂ ಹುಟ್ಟಿಕೊಂಡಿದ್ದಾರೆ. ಕಷ್ಟಪಟ್ಟು ಒಣಗಿಸಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟರೆ ಕಳ್ಳರು ಅಲ್ಲಿಗೂ ಕನ್ನ ಹಾಕಿ ಕದಿಯುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಇದೀಗ ಕಾಫಿ ಮತ್ತು ಕಾಳು ಮೆಣಸು ಕೊಯ್ಲು ಮಾಡುವ ಕಾಲವಾಗಿದ್ದು, ಕೊಯ್ಲು ಮಾಡಿರುವ ಕಾಫಿ ಮತ್ತು ಕಾಳು ಮೆಣಸನ್ನು ಸಂಗ್ರಹ ಮಾಡಿರುವ ಸ್ಥಳಗಳಿಂದ ಕಳವು ಮಾಡಿರುವ ಕುರಿತು ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಇದು ಬೆಳೆಗಾರರ ನಿದ್ದೆಗೆಡಿಸಿರುವ ಹಿನ್ನೆಲೆಯಲ್ಲಿ ಕೊಡಗು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕಳ್ಳರ ಕೈಚಳಕಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರ ಮಾಡುವವರೊಂದಿಗ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರ ಸಂಪೂರ್ಣ ಮಾಹಿತಿ ಸಂಗ್ರಹಿಸುವAತೆ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಮಾರಾಟ ಮಾಡುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ವ್ಯಾಪಾರಸ್ಥರ ಪರಿಶೀಲನೆ ಸಂದರ್ಭ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಖರೀದಿದಾರರ ವಿವರವನ್ನು ಸಂಗ್ರಹಿಸದಿರುವುದು ಕಂಡು ಬಂದಲ್ಲಿ ಅಂತಹ ವ್ಯಾಪಾರಸ್ಥರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿದೆ.
ಕೊಡಗಿನಲ್ಲಿ ಕಾಫಿ ಮತ್ತು ಕರಿಮೆಣಸು ಕಳ್ಳರ ಹಾವಳಿ ತಡೆಗಟ್ಟಲು ಬೆಳೆಗಾರರು ಮತ್ತು ವ್ಯಾಪಾರಿಗಳ ಸಹಕಾರವೂ ಅಗತ್ಯವಾಗಿರುತ್ತದೆ. ಕಾಫಿ ಅಥವಾ ಕರಿಮೆಣಸು ವ್ಯಾಪಾರ ಸಂದರ್ಭ ಮಾರಾಟ ಮಾಡುವವರ ಬಗ್ಗೆ ಸಂಶಯ ಕಂಡು ಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಿ ಮಾಹಿತಿ ಒದಗಿಸಬಹುದು. ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಮನೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಬಹುದು.
ಜಿಲ್ಲೆಯಲ್ಲಿನ ಕಾಫಿ ಮತ್ತು ಕಾಳು ಮೆಣಸು ವ್ಯಾಪಾರಸ್ಥರು ಕಾಫಿ ಮತ್ತು ಕಾಳು ಮೆಣಸು ಖರೀದಿ ಮಾಡುವ ಸಂದರ್ಭದಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು. ಬೆಳೆ ಖರೀದಿ ಸಂದರ್ಭ ಸಂಶಯ ಉಂಟಾದಲ್ಲಿ ಅಂತಹ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದುಕೊಳ್ಳಬೇಕು. ಮಾರಾಟದಾರರ ಹಿನ್ನೆಲೆಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ವ್ಯವಹರಿಸಬೇಕು.
ಕೆ. ರಾಮರಾಜನ್, ಕೊಡಗು ಎಸ್.ಪಿ.
ಕಾಫಿ ಬೆಳೆಗಾರರಿಗೆ ಅಗತ್ಯಇರುವ ಸಮಯದಲ್ಲಿ ಮಳೆ ಕೈ ಕೊಟ್ಟಿತ್ತು. ಆದರೆ ಈಗ ನಮಗೆ ಮಳೆ ಬೇಕಿಲ್ಲ. ಇಂಥ ಸಮಯದಲ್ಲಿ ಮಳೆ ಬರುತ್ತಿದೆ. ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಕೂಡ ಸಿಗುತ್ತಿಲ್ಲ. ಹಾಗಾಗಿ ತೋಟದಲ್ಲಿ ಬೆಳೆದ ಕಾಫಿ ಪೂರ್ಣ ಪ್ರಮಾಣದಲ್ಲಿ ನಮಗೆ ಸಿಗಲು ಸಮಸ್ಯೆ ಆಗಿದೆ. ಕಾಫಿ ತಂದು ಕಣದಲ್ಲಿ ಒಣ ಹಾಕಿದರೆ ಇಲ್ಲಿ ಕಳ್ಳರ ಹಾವಳಿಯೂ ಜಾಸ್ತಿ ಆಗುತ್ತಿದೆ. ಕಾಫಿಗೆ ಈಗ ಸ್ವಲ್ಪ ಬೆಲೆ ಬಂದಿದೆ ಆದರೆ ಫಸಲು ಇಲ್ಲದ ಕಾರಣ ಬೆಳೆಗಾರರಿಗೆ ಪ್ರಯೋಜನ ಆಗುತ್ತಿಲ್ಲ.
ಹೇಮಂತ್ ಪಾರೇರ, ಕಾಫಿ ಬೆಳೆಗಾರ, ಎಡವನಾಡು