ಪತ್ರಿಕಾರಂಗ ಸಮಾಜದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುವ ದಿಟ್ಟತನವನ್ನು ಹೊಂದಿದೆ

19adarshkdga3
Published on

ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೪ನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದ ಕೈಗನ್ನಡಿಯಂತೆ ಕಾರ್ಯನಿರ್ವಹಿಸುವ ದಿಟ್ಟತನವನ್ನು ಹೊಂದಿದೆ. ಪತ್ರಕರ್ತರಾದವರಿಗೆ ವಿವೇಚನಾ ಶಕ್ತಿಯ ಅಗತ್ಯವಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಅಶೋಕ್ ಸಂಗಪ್ಪ ಅಭಿಪ್ರಾಯಪಟ್ಟರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ ಬಿ.ಜಿ.ಅನಂತಶಯನ ರಚಿತ ಸೊಡರು ಪುಸ್ತಕ ವಿಮರ್ಶೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪತ್ರಕರ್ತರಿಗೆ ಭಾಷಾ ಕೌಶಲ್ಯ, ವಿಷಯದ ಆಳವಾದ ಜ್ಞಾನ, ಅಧ್ಯಯನ, ವಿಷಯವನ್ನು ವಿಶ್ಲೇಷಿಸುವ ಅರಿವು ಇರಬೇಕು. ವಿವೇಚನಾತ್ಮಕ ಶಕ್ತಿಯನ್ನು ಹೊಂದಿರಬೇಕು ಮತ್ತು ಸನ್ನಿವೇಶದ ಗಾಂಭೀರ್ಯತೆ ತಿಳಿದಿರಬೇಕು ಎಂದರು.


ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮದ ಬಗ್ಗೆ ಕಾರ್ಯಾಗಾರ ಮತ್ತು ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವ ಕುರಿತು ಹಿರಿಯರ ಮಾರ್ಗದರ್ಶನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.


ಸೊಡರು ಎಂದರೆ ದೀಪ ಎಂದರ್ಥ, ಸೊಡರು ಎಂಬ ಜ್ಞಾನದ ಜ್ಯೋತಿಯ ಮೂಲಕ ನಮ್ಮಲ್ಲಿರುವ ಅಜ್ಞಾನವನ್ನು ತೊಡೆದು ಹಾಕಬೇಕು. ಸತ್ಯವನ್ನು ಎಂದೂ ಅಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡಬಾರದು. ಸತ್ಯ ಎಂಬುವುದು ಅತ್ಯಂತ ಪವಿತ್ರವಾದ ದಾರಿ ಎಂದು ಪ್ರೊ.ಅಶೋಕ್ ಸಂಗಪ್ಪ ತಿಳಿಸಿದರು.


ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಸೊಡರು ಪುಸ್ತಕ ಮಾರ್ಗದರ್ಶಿ ಕೈಪಿಡಿಯಂತಿದೆ, ನೈಜ ಅನುಭವವನ್ನು ವಿವರಿಸಲಾಗಿದೆ, ವಿದ್ಯಾರ್ಥಿಗಳು ಓದುವ ಅಗತ್ಯವಿದೆ. ಯಾವುದೇ ಪರಿಸ್ಥಿತಿಯಲ್ಲೂ ಪತ್ರಕರ್ತರು ಎದೆಗುಂದದೆ ಮುನ್ನಗ್ಗಿ ಕಾರ್ಯ ನಿರ್ವಹಿಸುವಂತಿರಬೇಕು. ಸತ್ಯಕ್ಕೆ ಸಮೀಪದ ವರದಿಗಳನ್ನು ಮಾಡಬೇಕು. ನೀಡುವ ಸುದ್ದಿ ಸಂಶಯಾಸ್ಪದವಾಗಿರಬಾರದು. ಪತ್ರಕರ್ತರು ಜನರು ಹಾಗೂ ಆಡಳಿತ ವ್ಯವಸ್ಥೆಯ ನಡುವೆ ಸೇತುವೆಯಿದ್ದಂತೆ, ಆದ್ದರಿಂದ ಅತಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.


ಸೊಡರು ಪುಸ್ತಕದ ಲೇಖಕ ಬಿ.ಜಿ.ಅನಂತಶಯನ ಮಾತನಾಡಿ, ಬ್ರಿಟಿಷ್ ಸಾಮ್ರಾಜ್ಯದ ದುರಾಡಳಿತವನ್ನು ಜನತೆಗೆ ಮುಟ್ಟಿಸುವ ಮೂಲಕ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅಂದು ಪತ್ರಿಕೋದ್ಯಮ ಹುಟ್ಟಿಕೊಂಡಿತು. ಆದರೆ ಸ್ವಾತಂತ್ರ್ಯಾ ನಂತರ ಪತ್ರಿಕೋದ್ಯಮ ತನ್ನ ಮೂಲ ಉದ್ದೇಶವನ್ನೇ ಮರೆತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಲು ಪ್ರಯತ್ನಿಸಬೇಕು. ಪತ್ರಿಕೋದ್ಯಮ ಸವಾಲಿನ ಕೆಲಸವಾಗಿದ್ದು, ಪತ್ರಕರ್ತನಿಗೆ ಸಮಯಪಾಲನೆ ಬಹಳ ಮುಖ್ಯ. ಸೊಡರು ಪುಸ್ತಕದಲ್ಲಿ ಪತ್ರಿಕೋದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಪತ್ರಿಕೋದ್ಯಮದಲ್ಲಿ ಬರುವ ಸವಾಲುಗಳ ಕುರಿತು ವಿವರಿಸಿದರು.


ಕಾಲೇಜು ಪ್ರಾಂಶುಪಾಲ ಡಾ.ಮೇಜರ್ ರಾಘವ ಬಿ. ಪ್ರಾಸ್ತವಿಕವಾಗಿ ಮಾತನಾಡಿ, ಪತ್ರಕರ್ತರು ಸಾಕಷ್ಟು ಏಳು ಬೀಳುಗಳ ನಡುವೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಒಂದು ದೋಣಿ ಮುಂದೆ ಸಾಗಲು ನಾವಿಕ ಹೇಗೆ ಮುಖ್ಯವೋ ಅದೇ ರೀತಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಕರ್ತರು ಮುಖ್ಯ. ಸೊಡರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೃತಿಯಾಗಿದೆ ಎಂದು ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಂಯೋಜಕಿ ಡಾ.ನಯನಾ ಕಶ್ಯಪ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net