

ಮೂಡಿಗೆರೆ: ಕಳೆದ ವರ್ಷ ಮೇ ಮೊದಲ ವಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಅವಧಿ ಮುಕ್ತಾಯಗೊಂಡು ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ನೇಮಕಗೊಂಡಿದ್ದ ಪಟ್ಟಣ ಪಂಚಾಯಿತಿಗೆ ಈಗ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಿದೆ. 15 ತಿಂಗಳಿಂದ ವನವಾಸದಲ್ಲಿದ್ದ ಸದಸ್ಯರಲ್ಲಿ ಮತ್ತೆ ಹುರುಪು ಮೂಡಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿಯಾಗಿದೆ. ಪಪಂನ ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಸಾಮಾನ್ಯ ಅಧ್ಯಕ್ಷ, ಬಿಸಿಎಂ(ಎ) ಉಪಾಧ್ಯಕ್ಷ ಸ್ಥಾನ ಮೀಸಲಾತಿಯಿತ್ತು. ಬಿಜೆಪಿಯಲ್ಲಿ ಆಂತರಿಕ ಒಪ್ಪಂದದಂತೆ ಮೊದಲ 10 ತಿಂಗಳ ಅವಧಿಗೆ ಪಿ.ಜಿ.ಅನುಕುಮಾರ್ ನಂತರ 20 ತಿಂಗಳು ಜೆ.ಬಿ.ಧರ್ಮಪಾಲ್ ಅಧ್ಯಕ್ಷರಾಗಿದ್ದರು. ಕಮಲಾಕ್ಷಮ್ಮ ನಂತರ ಸುಧೀರ್ ತಲಾ 15 ತಿಂಗಳು ಉಪಾಧ್ಯಕ್ಷರಾಗಿದ್ದರು. ಈ ಬಾರಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಕಟ್ಟಿಟ್ಟ ಬುತ್ತಿ ಎಂಬಂತೆ ಕಂಡುಬರುತ್ತದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಂತೆ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲ. 8ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಎಚ್.ಪಿ.ರಮೇಶ್ ಒಬ್ಬರೇ ಪ.ಜಾತಿ ಸಾಮಾನ್ಯಕ್ಕೆ ಮೀಸಲಾತಿಗೆ ಅನುಗುಣವಾದ ಅಭ್ಯರ್ಥಿ ಇರುವ ಕಾರಣ ಕಾಂಗ್ರೆಸಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬರುವಂತೆ ಕಂಡುಬರುತ್ತಿದೆ.
ಬಿಜೆಪಿಯಲ್ಲಿ 6, ಜೆಡಿಎಸ್ 1, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಬಿಜೆಪಿಗೆ 7 ಸದಸ್ಯರ ಬಲವಿದೆ. ವಿಧಾನಪರಿಷತ್ ಸದಸ್ಯರು ಜಿಲ್ಲೆಯ ಯಾವುದಾದರೂ ಒಂದು ಕಡೆ ಮತ ಚಲಾಯಿಸುವ ತೀರ್ಮಾನ ತೆಗೆದುಕೊಳ್ಳಬಹುದು. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಕಳೆದ ಬಾರಿ ಕೊಪ್ಪ ಪಪಂ ಆಯ್ಕೆ ಮಾಡಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಯಾವ ಸ್ಥಳೀಯ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಕಾದುನೋಡಬೇಕು.
ಕಾಂಗ್ರೆಸ್‌ನಲ್ಲಿ 4 ಸದಸ್ಯರಿದ್ದಾರೆ. ಶಾಸಕಿ ನಯನಾ ಮೋಟಮ್ಮ ಸೇರಿ 5 ಮತಗಳಿವೆ. ಬಿಜೆಪಿಗೆ ಹೆಚ್ಚು ಮತಗಳಿರುವ ಕಾರಣ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ಸಿಗುವುದು ಅನುಮಾನ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯವಾಗಿ ಕಾಂಗ್ರೆಸ್ ಶಾಸಕರಿರುವ ಕಾರಣ ಬಿಜೆಪಿ ಒಂದೆರಡು ಸದಸ್ಯರು ಸ್ವಪಕ್ಷದಿಂದ ಸಿಡಿದು ಹೊರಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹಾಗೊಂದು ವೇಳೆ ಬಿಜೆಪಿ ಇಬ್ಬರು ಸದಸ್ಯರು ಕಾಂಗ್ರೆಸ್‌ಗೆ ಹೋಗಿ ಮತ ಚಲಾಯಿಸಿದರೆ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ವೆಂಕಟೇಶ್ ಅಧ್ಯಕ್ಷರಾಗಲಿದ್ದಾರೆ. ಬಿಜೆಪಿಯಲ್ಲಿ ಎಲ್ಲ ಸದಸ್ಯರೂ ಉಳಿದುಕೊಂಡರೆ ಪಿ.ಜಿ.ಅನುಕುಮಾರ್, ಜೆ.ಬಿ.ಧರ್ಮಪಾಲ್ ಅಥವಾ ಆಶಾ ಮೋಹನ್ ಈ ಮೂವರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ.