ವಚನಗಳ ಸಂರಕ್ಷಣೆ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ

halakatti
ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಎಚ್.ಉಮೇಶ್ ಉದ್ಘಾಟಿಸಿದರು. ಶಿವಯೋಗಿ ಹಂಚಿನಮನೆ, ರುದ್ರಮುನಿ ಸಜ್ಜನ್, ಡಾ. ಎ.ಎಸ್.ಚಂದ್ರಶೇಖರ್, ಜಿ.ಬೆನಕಪ್ಪ, ಜಯಮ್ಮ ಕುಬಸದ್, ಗಾಯತ್ರಿ ಪಾಟೀಲ್ ಇತರರಿದ್ದರು.
Published on

ಶಿವಮೊಗ್ಗ: ನಿರಂತರ ಸಂಶೋಧನೆ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದು, ಸುಮಾರು 22 ಸಾವಿರ ವಚನಗಳನ್ನು ಸಂಗ್ರಹಿಸುವ ಮೂಲಕ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದವರು ಫ.ಗು.ಹಳಕಟ್ಟಿ (ಫಕೀರಪ್ಪ ಗುರುಬಸಪ್ಪ ಹಳಕಟ್ಟಿ) ಎಂದು ಪೆಸಿಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಯೋಗಿ ಹಂಚಿನಮನೆ ತಿಳಿಸಿದರು.

ಜಿಲ್ಲಾಡಳಿತದಿಂದ ಮಂಗಳವಾರ ಫ.ಗು.ಹಳಕಟ್ಟಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಚನಗಳ ಮೌಲ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಅವರು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಜನರಿಗೆ ತಲುಪಿಸಿದರು. ಇದು ಕನ್ನಡ ನಾಡಿಗೆ ನೀಡಿದ ದೊಡ್ಡ ಕೊಡುಗೆ ಎಂದು ಹೇಳಿದರು.
1880ರ ಜು.2ರಂದು ಧಾರವಾಡದಲ್ಲಿ ಜನಿಸಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕನ್ನಡದ ಅಸ್ಮಿತೆಗಾಗಿ ಹೋರಾಟದ ಮನೋಭಾವ ಹೊಂದಿದ್ದರು. 1901ರಿಂದ 1920ರವರೆಗೆ ಅವರು ತಮ್ಮ ಶಿಕ್ಷಣ ಮತ್ತು ಜೀವನದ ಬಹು ಮುಖ್ಯ ಉದ್ದೇಶಗಳಾದ ಕನ್ನಡ ಭಾಷೆ ಹಾಗೂ ವಚನ ಸಾಹಿತ್ಯ ಸಂರಕ್ಷಣೆಗಾಗಿ ಅವಿರತ ಶ್ರಮಿಸಿದರು ಎಂದು ವಿವರಿಸಿದರು.
ವಕೀಲಿ ವೃತ್ತಿ ಜೀವನ ಆರಂಭಿಸಿದ ಅವರು, 1917ರಲ್ಲಿ ಬಾಗಲಕೋಟೆಯಲ್ಲಿ ಬಿಎಲ್ಡಿ ವಿದ್ಯಾಸಂಸ್ಥೆ ಆರಂಭಿಸಿದರು. ಐದಾರು ನೌಕರರು, 80 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 4,500 ಸಿಬ್ಬಂದಿ, 25 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸಿದ್ದೇಶ್ವರ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆರಂಭಿಸಿದರು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ.ಮಹಾರುದ್ರ, ಕದಳಿ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟೀಲ್, ಶಾಶ್ವತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್, ಜಯಮ್ಮ ಕುಬಸದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net