

ಶಿರಸಿ: ಆ ಕುದುರೆಗೆ ಮೊದಲೇ ಒಂದು ಕಣ್ಣು ಕಾಣದಾಗಿತ್ತು. ಕೆಲವೇ ದಿನಗಳಲ್ಲಿ ಉದರದಲ್ಲಿಟ್ಟುಕೊಂಡ ಮುದ್ದಾದ ಮರಿಗೆ ಜನ್ಮ ನೀಡುವ ತವಕದಲ್ಲಿತ್ತು. ಆದರೆ, ಬರಸಿಡಿಲು ಬಂದೆರಗಿದಂತೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಇಹಲೋಕ ತ್ಯಜಿಸುವ ಹಂತ ತಲುಪಿತ್ತು. ಇಂಥ ಸ್ಥಿತಿಯಲ್ಲಿ ಆಪದ್ಬಾಂಧವನಾಗಿ ಕಾರ್ಯ ನಿರ್ವಹಿಸಿದ ಶಿರಸಿಯ ಪ್ರಾಣಿ-ಪಕ್ಷಿಗಳ ಅನಾಥಾಶ್ರಮವು ಕುದುರೆಗೆ ಮರುಜೀವ ನೀಡಿದೆ!
ಆ. 17ರಂದು ಶಿವಮೊಗ್ಗದ ಅಲ್ಕೋಳ ವೃತ್ತದಲ್ಲಿ ಒಂದು ಕಣ್ಣು ಇಲ್ಲದ ಗರ್ಭಿಣಿ ಕುದುರೆಗೆ ಅಪಘಾತವಾಗಿತ್ತು. ಶಿವಮೊಗ್ಗದಲ್ಲಿ ಯಾರೂ ಚಿಕಿತ್ಸೆಗೆ ಸಹಕರಿಸದ ಕಾರಣ ಸತತವಾಗಿ ಎರಡು ದಿನಗಳಿಂದ ನರಳಾಡುತ್ತಿದ್ದ ಈ ಕುದುರೆಯನ್ನು ಶಿವಮೊಗ್ಗದ ನಾಗರತ್ನರಾವ್ ಹಾಗೂ ನೆಲ್ಸನ್ ಡಿಸೋಜಾ ಎಂಬುವವರು ಶಿರಸಿಯ ಪ್ರಾಣಿ-ಪಕ್ಷಿಗಳ ಅನಾಥಾಶ್ರಮವಾದ ಅಮೇಜಿಂಗ್ ಪೆಟ್ ಪ್ಲಾನೆಟ್‌ಗೆ ತಂದು ಬಿಟ್ಟಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಕುದುರೆ ಸಾಯುವ ಸ್ಥಿತಿಯಲ್ಲಿತ್ತು. ಹೊಟ್ಟೆಯ ಭಾಗದಲ್ಲಿ ಸುಮಾರು ಎರಡು ಅಡಿಯಷ್ಟು ಉದ್ದ ಚರ್ಮ ಹರಿದಿತ್ತು. ಅಲ್ಲದೆ, ಅದರ ಗರ್ಭಕೋಶವು ಹೊರಗಡೆ ಕಾಣುತ್ತಿತ್ತು. ಪ್ರಾಣಿ-ಪಕ್ಷಿ ಅನಾಥಾಶ್ರಮದ ರಾಜೇಂದ್ರ ಅವರು ಕುದುರೆಯ ಪ್ರಾಣ ಮತ್ತು ಅದರ ಮರಿಯನ್ನು ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಕುದುರೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಕುದುರೆ ಹಾಗೂ ಮರಿ ಎರಡೂ ಈಗ ಆರೋಗ್ಯವಾಗಿವೆ.
ಈ ಕುದುರೆ ಸಾಯುವ ಸ್ಥಿತಿಯಲ್ಲಿದ್ದಾಗ ಪ್ರಾಣಿ-ಪಕ್ಷಿಗಳ ಅನಾಥಾಶ್ರಮ ಅಮೇಜಿಂಗ್ ಪೆಟ್ ಪ್ಲಾನೆಟ್‌ಗೆ ತಂದು ಬಿಡಲಾಗಿತ್ತು. ಈಗ ತಾಯಿ-ಮರಿ ಆರೋಗ್ಯದಿಂದಿದ್ದು, ನಮ್ಮ ಪ್ರಯತ್ನ ಫಲ ಕೊಟ್ಟಿರುವುದು ಸಮಾಧಾನ ತಂದಿದೆ. ರಾಜೇಂದ್ರ ಸಿರ್ಸಿಕರ್ ಪ್ರಾಣಿ-ಪಕ್ಷಿ ತಜ್ಞರು